
ಮಡಿಕೇರಿ ಜು.16 NEWS DESK : ಕೋಟ್ಯಂತರ ಜನರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿರುವ ಸ್ವರ ಸಾಮ್ರಾಜ್ಞಿ, ಗಾನ ಕೋಗಿಲೆ ಎಸ್. ಜಾನಕಿಯಮ್ಮನವರಿಗೆ, ಸುಮಧುರ ಗಾಯನಗಳ ಪುಷ್ಪಮಾಲೆಯನ್ನು ತೊಡಿಸಿ, ನುಡಿನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸಂಯುಕ್ತ ಆಶ್ರಯದಲ್ಲಿ ಕೆಲ ದಿನಗಳ ಹಿಂದಷ್ಟೆ ನಮ್ಮನ್ನಗಲಿರುವ ಎಸ್. ಜಾನಕಿಯವರಿಗೆ ನಗರದ ಪತ್ರಿಕಾ ಭವನದಲ್ಲಿ ಗೌರವ ನಮನ ಸಲ್ಲಿಸುವ ಮೂಲಕ, ಅವರ ಅಗಲಿಕೆಗೆ ಸಂತಾಪವನ್ನು ವ್ಯಕ್ತಪಡಿಸಲಾಯಿತು. ಸತಿ ಸಕ್ಕೂಬಾಯಿ ಚಲನ ಚಿತ್ರಕ್ಕೆ ಜಾನಕಿಯವರು ಹಾಡಿದ “ಓ ಪಾಂಡುರಂಗ ಪ್ರಭೋ ವಿಠಲ”ವನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್ ಅವರು ಸುಮಧುರವಾಗಿ ಹಾಡಿದರೆ, ಜಿಲ್ಲಾ ಕಸಾಪ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು, ಜಾನಕಿಯಮ್ಮನವರು ಹಾಡಿರುವ ಹಾಡುಗಳನ್ನೆಂದಿಗೂ ಮರೆಯಲಾಗದ್ದು, ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವೆಂದು ಅಭಿಪ್ರಾಯಿಸಿ, ಶೀಘ್ರದಲ್ಲೆ ಜಿಲ್ಲಾ ಕಸಾಪ ಮೂಲಕ ಜಿಲ್ಲಾ ವ್ಯಾಪ್ತಿಯ ಎಲ್ಲಾ ಗಾಯಕ ಗಾಯಕಿಯರನ್ನು ಒಗ್ಗೂಡಿಸಿ ಜಾನಕಿಯವರು ಹಾಡಿರುವ ಹಾಡುಗಳ ಕಾರ್ಯಕ್ರಮವನನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಕನ್ನಡವನ್ನು ಒಳಗೊಂಡಂತೆ ಜಾನಕಿಯವರು ಸುಮಾರು 18 ಕ್ಕೂ ಹೆಚ್ಚಿನ ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನು ಹಾಡುವ ಮೂಲಕ, ಗಾನ ಸುಧೆಯನ್ನು ನಾಡಿನ ಜನತೆಗೆ ಉಣಬಡಿಸಿದ್ದಾರೆಂದು ತಿಳಿಸಿದರು. ಈ ಸಂದರ್ಭ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷೆ ತುಳಸಿ ಮೋºನ್ ಅವರು ” ಆಕಾಶ ದೀಪವೂ ನೀನೆ…” ಹಾಡನ್ನು ಪ್ರಸ್ತುತ ಪಡಿಸುವ ಮೂಲಕ ಜಾನಕಿಯವರ ಭೌತಿಕವಾಗಿ ಇಲ್ಲವಾದರು, ಹಾಡಿನ ಮೂಲಕ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎನ್ನುವುದನ್ನು ರುಜುವಾತುಪಡಿಸಿದರು. ತಾಲ್ಲೂಕು ಕಸಾಪ ಪ್ರಮುಖರಾದ ಲೋಕನಾಥ್ ಅಮೆಚೂರ್ ಅವರು, ಗಾಯಕರಿಗೆಂದಿಗೂ ಸಾವಿಲ್ಲ. ಜಾನಕಿಯವರು ತಮ್ಮ ಹಾಡುಗಳ ಮೂಲಕ ಪ್ರತಿ ಮನೆ ಮನಗಳಲ್ಲಿ ನೆಲೆಸಿದ್ದಾರೆಂದು ನುಡಿದರೆ, ಪ್ರೇಮಾ ರಾಘವಯ್ಯ ಅವರು, ಅತ್ಯಂತ ಪ್ರಸಿದ್ಧ ಕನ್ನಡ ಚಲನಚಿತ್ರ ಬಯಲು ದಾರಿಯ “ಬಾನಲ್ಲು ನೀನೆ ಭುವಿಯಲ್ಲು ನೀನೆ…” ಹಾಡನ್ನು ಹಾಡುವ ಮೂಲಕ ಜಾನಕಿಯವರಿಗೆ ಗೌರವವÀನ್ನು ಅರ್ಪಿಸಿದರು. ಉಪನ್ಯಾಸಕಿ ಪ್ರತಿಮಾ ರೈ ಅವರ “ಕಂಗಳು ತುಂಬಿರಲು…” ಹಾಡು, ಶಿಕ್ಷಕಿ ಜಯಲಕ್ಷ್ಮಿ ಅವರ “ನನ್ನ ಆಸೆ ಹಣ್ಣಾಗಿ” ಹಾಡುವ ಮೂಲಕ ಗಾನ ಕೋಗಿಲೆಗೆ ಗೌರವವನ್ನು ಸಲ್ಲಿಸಿದರೆ, ಬಳಗದ ಅಧ್ಯಕ್ಷ ಪ್ರೇಂ ಕುಮಾರ್, ಕೆ.ಟಿ.ಬೇಬಿ ಮ್ಯಾಥ್ಯು, ಅಂಬೆಕಲ್ಲು ನವೀನ್, ರೇವತಿ ರಮೇಶ್, ಸಂಪತ್ ಕುಮಾರ್, ಉಮೇಶ್ ಸೇರಿದಂತೆ ಹಲವರು ಜಾನಕಿಯಮ್ಮನವರಿಗೆ ನುಡಿ ನಮನ ಸಲ್ಲಿಸಿದರು. ಗಾನ ಕೋಗಿಲೆ ಎಸ್.ಜಾನಕಿಯವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಇದೇ ಸಂದರ್ಭ ಸಲ್ಲಿಸಲಾಯಿತು.










