
ಮಡಿಕೇರಿ NEWS DESK ಜು.17 : ಸಂಪಾಜೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ಕೋಣ ಬೇಟೆಯಾಡಿ ಅದರ ಮಾಂಸ ಸಾಗಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಜೀಪಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡು ಹಾರಿಸಿದ ಸಂದರ್ಭ ಜೀಪಿನಲ್ಲಿದ್ದ ಇಬ್ಬರು ಆರೋಪಿಗಳು ಗಾಯಗೊಂಡ ಘಟನೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಯಾಕೂಬ್ ಹಾಗೂ ಜುಬೇರ್ ಗಾಯಗೊಂಡ ಆರೋಪಿಗಳಾಗಿದ್ದಾರೆ. ಜೀಪನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಸಂದರ್ಭ 266 ಕೆ.ಜಿ ಕಾಡು ಕೋಣದ ಮಾಂಸ, ಕತ್ತಿ, 4 ಜೀವಂತ ಕಾಡತೂಸು ಮತ್ತು ಚಾಕುಗಳು ಪತ್ತೆಯಾಗಿವೆ. ಸಂಪಾಜೆ ವ್ಯಾಪ್ತಿಯಲ್ಲಿ ವನ್ಯಜೀವಿಯನ್ನು ಹತ್ಯೆ ಮಾಡಿ ಅದರ ಮಾಂಸವನ್ನು ವಾಹನದಲ್ಲಿ ಸಾಗಿಸುತ್ತಿರುವ ಬಗ್ಗೆ ಗುರುವಾರ ರಾತ್ರಿ ಮಡಿಕೇರಿ ವಲಯ ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ-ಬೆಟ್ಟತ್ತೂರು ರಸ್ತೆಯ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ರಾತ್ರಿ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾದು ಕುಳಿತಿದ್ದರು. ಈ ಸಂದರ್ಭ ಜೀಪು ಕೂಡ ಆಗಮಿಸಿದ್ದು, ಅರಣ್ಯ ಸಿಬ್ಬಂದಿ ಜೀಪನ್ನು ತಡೆಯುವ ಪ್ರಯತ್ನ ನಡೆಸಿದ್ದರು. ಅರಣ್ಯ ಸಿಬ್ಬಂದಿಗಳ ಮೇಲೆ ಜೀಪನ್ನು ಹರಿಸುವ ಪ್ರಯತ್ನ ನಡೆದಿದ್ದು, ಈ ವೇಳೆ ಅರಣ್ಯ ಸಿಬ್ಬಂದಿಗಳು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಗುಂಡು ಜೀಪಿಗೆ ತಗುಲಿದ್ದು, ವಾಹನದಲ್ಲಿದ್ದ ಕೊಳಕೇರಿ ಗ್ರಾಮದ ಯಾಕೂಬ್ ಮತ್ತು ಜುಬೇರ್ ಗಾಯಗೊಂಡಿದ್ದಾರೆ ಎಂದು ಮಡಿಕೇರಿ ವಿಭಾಗದ ಡಿಸಿಎಫ್ ಅಭಿಷೇಕ್ ತಿಳಿಸಿದ್ದಾರೆ. *ಆರೋಪ* ಅರಣ್ಯ ಸಿಬ್ಬಂದಿಗಳು ತಡೆದಾಗ ತಿರುವಿನಲ್ಲಿ ತಕ್ಷಣ ಜೀಪ್ ನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಈ ಸಂದರ್ಭ ಗುಂಡು ಹಾರಿಸಲಾಗಿದೆ ಎಂದು ಗಾಯಾಳು ಆರೋಪಿಗಳು ಆರೋಪಿಸಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ವೈದ್ಯರ ಶಿಫಾರಸ್ಸಿನಂತೆ ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.









