
ಸುಂಟಿಕೊಪ್ಪ ಜು.22 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ವಿಕಲಚೇತನರಿಗೆ ಆರೋಗ್ಯ ತಪಾಸಣೆ ಆಯೋಜಿಸಿರುವುದು ಅತ್ಯಂತ ಮಹತ್ವದ ಸಮಾಜಮುಖಿ ಕಾರ್ಯವಾಗಿದೆ. ಇಂತಹ ಶಿಬಿರಗಳು ವಿಕಲಚೇತನರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಸಲಹೆಗಳನ್ನು ನೀಡಲು ಹೆಚ್ಚು ಸಹಕಾರಿಯಾಗುತ್ತವೆ ಎಂದರು. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ಕಾಮತ್ ಮಾತನಾಡಿ, “ವಿಕಲಚೇತನರು ಸಮಾಜದ ಸಮಾನ ಸದಸ್ಯರಾಗಿದ್ದಾರೆ. ಅವರಿಗೆ ಸೂಕ್ತ ಅವಕಾಶ, ಬೆಂಬಲ ಮತ್ತು ಪ್ರೋತ್ಸಾಹ ದೊರೆತರೆ ಅವರು ಶಿಕ್ಷಣ, ಕ್ರೀಡೆ, ಕಲೆ, ವಿಜ್ಞಾನ ಹಾಗೂ ಉದ್ಯೋಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ” ಎಂದು ತಿಳಿಸಿದರು. ವಿಕಲಚೇತನರ ಕಲ್ಯಾಣ ಅಧಿಕಾರಿ ವಿಮಲ ಮಾತನಾಡಿ, ವಿಕಲಚೇತನರು ದೈನಂದಿನ ಚಟುವಟಿಕೆಗಳಲ್ಲಿ ಹತ್ತಾರು ಸವಾಲುಗಳನ್ನು ಎದುರಿಸುತ್ತಾರೆ. ಅವರಿಗೆ ಶಿಕ್ಷಣ, ಸಮಾನ ಅವಕಾಶ, ಗೌರವದಿಂದ ಬದುಕುವ ಹಕ್ಕು ಹಾಗೂ ಉದ್ಯೋಗಗಳಲ್ಲಿ ಮೀಸಲಾತಿ ಸಿಗಬೇಕು. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಅವರಿಗೆ ಸಮರ್ಪಕವಾಗಿ ತಲುಪುವಂತಾಗಬೇಕು ಎಂದು ಪ್ರತಿಪಾದಿಸಿದರು. :: 75ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯ:: ಶಿಬಿರದಲ್ಲಿ 75ಕ್ಕೂ ಅಧಿಕ ವಿಕಲಚೇತನರು ಪಾಲ್ಗೊಂಡು ಆರೋಗ್ಯ ತಪಾಸಣೆ ಹಾಗೂ ಉಚಿತ ವೈದ್ಯಕೀಯ ಸೇವೆಯ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಡಾ. ದಿವ್ಯಶ್ರೀ, ಡಾ. ಬಸವರಾಜ್, ವಿವಿಧ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಹಾಗೂ ಸುಂಟಿಕೊಪ್ಪ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವಾಣಿ, ಲೋಕೇಶ್, ಕವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.









