
ಮಡಿಕೇರಿ ಆ.10 NEWS DESK : ಜನತಾ ಕಾಲೋನಿಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಎದೆಹಾಲಿನ ಮಹತ್ವ ಮತ್ತು ತಾಯಿ-ಮಗುವಿನ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆರು ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲನ್ನೇ ನೀಡುವ ಮಹತ್ವ, ಆರು ತಿಂಗಳ ನಂತರ ನೀಡಬೇಕಾದ ಮೇಲು ಆಹಾರ, ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸುವುದು ಹಾಗೂ ಹೆರಿಗೆಗಳ ನಡುವೆ ಸೂಕ್ತ ಅಂತರ ಕಾಯ್ದುಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು. ಅಲ್ಲದೆ, ಮಕ್ಕಳಲ್ಲಿ ಜಂತುಹುಳು ನಿವಾರಣೆಗಾಗಿ ನೀಡಲಾಗುವ ಅಲ್ಬೆಂಡಜೋಲ್ ಮಾತ್ರೆಯ ಬಳಕೆ, ಭಾಗ್ಯಲಕ್ಷ್ಮಿ ಯೋಜನೆ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಜಾ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕುಸುಮ ಅವರು ವಿವಿಧ ವಿಷಯಗಳ ಕುರಿತು ವಿವರವಾಗಿ ತಿಳಿಸಿದರು. ಆಶಾ ಕಾರ್ಯಕರ್ತೆ ಹೇಮಾವತಿ, ಅಂಗನವಾಡಿ ಕಾರ್ಯಕರ್ತೆ ರಮ್ಯಾ ಕಾರ್ಯಕ್ರಮವನ್ನು ಆಯೋಜಿಸಿದರು. ಗರ್ಭಿಣಿಯರು, ಬಾಣಂತಿಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










