
ನಾಪೋಕ್ಲು ಆ.10 NEWS DESK : ನಮ್ಮ ಆಚಾರ–ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಮಕ್ಕಳಲ್ಲಿ ಸಮಾಜದ ಬಗ್ಗೆ ಅರಿವು ಮೂಡಿಸಬೇಕು. ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸೋಲೂರು, ರಾಮನಗರದ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು. ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಆಟಿಡೊಂಜಿ ದಿನಾಚರಣೆ, ಬಿಲ್ಲವ ಸಮುದಾಯ ಭವನದ ಶಂಕುಸ್ಥಾಪನೆ ಹಾಗೂ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ನಡೆದ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ–ವಿಚಾರ ಹಾಗೂ ಪರಂಪರೆಯ ಪರಿಚಯ ಮಾಡಿಕೊಡುವ ಅಗತ್ಯವಿದೆ. ಶ್ರೀ ನಾರಾಯಣಗುರುಗಳ ಧಾರ್ಮಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸ್ಮರಿಸಿಕೊಂಡು, ಸಮಾಜದ ಎಲ್ಲರಿಗೂ ಸನ್ಮಂಗಲ ದೊರೆಯಲಿ ಎಂದು ಆಶಿಸಿದರು. :: ಬಿಲ್ಲವ ಸಮಾಜದ ಕೊಡುಗೆ ಶ್ಲಾಘನೀಯ: ಎ.ಎಸ್. ಪೊನ್ನಣ್ಣ :: ವಿರಾಜಪೇಟೆ ಶಾಸಕ ಹಾಗೂ ವಿಧಾನಸಭೆಯ ಉಪಸಭಾಪತಿ ಎ.ಎಸ್. ಪೊನ್ನಣ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ದಕ್ಷಿಣ ಕನ್ನಡದಿಂದ ಕೊಡಗು ಜಿಲ್ಲೆಗೆ ಬಂದು ಶ್ರಮ, ಶಿಸ್ತು ಹಾಗೂ ಸಂಘಟನಾ ಮನೋಭಾವದೊಂದಿಗೆ ಬಿಲ್ಲವ ಸಮಾಜ ಉತ್ತಮ ಅಭಿವೃದ್ಧಿ ಸಾಧಿಸಿದೆ. ಕೊಡಗು ಜಿಲ್ಲೆಯ ಅಭಿವೃದ್ಧಿಗೂ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು. ಬಿಲ್ಲವ ಸಮುದಾಯ ಶ್ರಮ, ಶಿಸ್ತುಬದ್ಧ ಜೀವನ ಹಾಗೂ ನೇರನುಡಿಗೆ ಹೆಸರುವಾಸಿಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕೊಡಗಿನಲ್ಲಿಯೂ ‘ನಾವೆಲ್ಲರೂ ಒಂದೇ’ ಎಂಬ ಭಾವನೆಯೊಂದಿಗೆ ಸಮಾಜ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ನಾಪೋಕ್ಲುವಿನಲ್ಲಿ ಬಿಲ್ಲವ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿದ್ದು, ಮುಂದಿನ ವರ್ಷವೇ ಕಟ್ಟಡ ನಿರ್ಮಾಣ ಪೂರ್ಣಗೊಂಡು ಸ್ವಂತ ಕಟ್ಟಡದಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದು ಆಶಿಸಿದರು. ನಾಪೋಕ್ಲುವಿನ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ಇರುವುದಾಗಿ ಭರವಸೆ ನೀಡಿದರು. :: ಸಮಾಜದ ಅಭಿವೃದ್ಧಿಗೆ ರೂ.5 ಲಕ್ಷ ಅನುದಾನ: ಸುಜಾ ಕುಶಾಲಪ್ಪ :: ವಿಧಾನ ಪರಿಷತ್ ಸದಸ್ಯೆ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ನಾಪೋಕ್ಲುವಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಿಲ್ಲವ ಸಮಾಜ ಉತ್ತಮ ಹೆಸರು ಗಳಿಸುತ್ತಿದೆ. ಸಮಾಜದ ಅಭಿವೃದ್ಧಿಗಾಗಿ ರೂ.5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು. ಸಮಾಜವನ್ನು ಮತ್ತಷ್ಟು ಮೇಲಕ್ಕೆತ್ತುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಬೇಕು. ಸರ್ಕಾರದ ವಿವಿಧ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸಂಘವು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. :: ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬನ್ನಿ: ಕೆ.ಜಿ. ಬೋಪಯ್ಯ :: ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಬಿಲ್ಲವ ಸಮಾಜವು ಸುಭದ್ರ ರಾಷ್ಟ್ರ ನಿರ್ಮಾಣ ಹಾಗೂ ಎಲ್ಲ ಸಮಾಜಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜ ಬಾಂಧವರು ಮುಖ್ಯವಾಹಿನಿಗೆ ಬರಬೇಕು. ಸಮಾಜದ ರಕ್ಷಣೆಯೊಂದಿಗೆ ದೇಶದ ರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು. ಒಗ್ಗಟ್ಟು, ಸಹಬಾಳ್ವೆ ಹಾಗೂ ಸ್ವಾಭಿಮಾನದಿಂದ ಬದುಕುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. :: ಭಾಷೆ–ಸಂಸ್ಕೃತಿಯನ್ನು ಪ್ರೀತಿಸಿ: ಸುರೇಶ್ ನಂಜಪ್ಪ:: ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ, ಉದ್ಯಮಿ ಹಾಗೂ ಸಮಾಜಸೇವಕ ಸುರೇಶ್ ನಂಜಪ್ಪ ಮಾತನಾಡಿ, ಕೊಡಗಿನ ವಿವಿಧ ಸಮುದಾಯಗಳ ಬೆಳವಣಿಗೆಯಲ್ಲಿ ಬಿಲ್ಲವ ಸಮಾಜದ ಪಾತ್ರ ಪ್ರಮುಖವಾಗಿದೆ ಎಂದರು. ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಅದರ ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿ ಬೆಳೆಯಬೇಕು. ಮೊದಲು ನಮ್ಮ ಭಾಷೆಯನ್ನು ಪ್ರೀತಿಸಿ, ನಂತರ ಇತರರ ಭಾಷೆಯನ್ನು ಗೌರವಿಸಬೇಕು. ಇದೇ ನಿಜವಾದ ಸಂಸ್ಕೃತಿ ಎಂದು ಹೇಳಿದರು. ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಶ್ರೇಯೋಭಿವೃದ್ಧಿಗೆ ತಮ್ಮಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಹಿಂದೂ ಸಮಾಜವನ್ನು ಕಟ್ಟುವಲ್ಲಿ ಬಿಲ್ಲವ ಸಮಾಜದ ಕೊಡುಗೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. :: ಸಮುದಾಯ ಭವನಕ್ಕೆ ಶಂಕುಸ್ಥಾಪನೆ ::
ಕಾರ್ಯಕ್ರಮಕ್ಕೂ ಮುನ್ನ ಸಮಾಜದ ನೂತನ ನಿವೇಶನದಲ್ಲಿ ಬಿಲ್ಲವ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಲಾಯಿತು. ವಿಖ್ಯಾತಾನಂದ ಸ್ವಾಮೀಜಿ, ಎ.ಎಸ್. ಪೊನ್ನಣ್ಣ, ಮಂಡೇಪಂಡ ಸುಜಾ ಕುಶಾಲಪ್ಪ ಸೇರಿದಂತೆ ಗಣ್ಯರು ಶಂಕುಸ್ಥಾಪನೆ ನೆರವೇರಿಸಿದರು. :: ಆಟಿ ಸಂಸ್ಕೃತಿಯ ಅನಾವರಣ :: ಕೊಡವ ಸಮಾಜದಲ್ಲಿ ಮುಟ್ಟಾಳೆ ಧರಿಸಿದ ಮಹಿಳೆಯರು ಕುಂಭಕಲಶದೊಂದಿಗೆ ಆಟಿ ಕಲಂಜ, ಅಕ್ಕಿಮುಡಿ ಹಾಗೂ ವಿವಿಧ ತರಕಾರಿ–ಪಲವಸ್ತುಗಳೊಂದಿಗೆ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಆಟಿ ಮಾಸದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಆಟಿ ತಿಂಡಿ–ತಿನಿಸುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಮಹಿಳೆಯರು ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಿದರು. :: 69 ಯೂನಿಟ್ ರಕ್ತ ಸಂಗ್ರಹ :: ಕಾರ್ಯಕ್ರಮದ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 69 ಮಂದಿ ರಕ್ತದಾನ ಮಾಡಿದ್ದು, 69 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜ ಬಾಂಧವರು ಹಾಗೂ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಅಪ್ರು ರವೀಂದ್ರ, ನಿವೃತ್ತ ಉಪಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ವಿ. ದೇವದಾಸ್, ಬಿಲ್ಲವ ಸಮಾಜ ಒಕ್ಕೂಟದ ಜಿಲ್ಲಾಧ್ಯಕ್ಷ ಲಿಂಗಪ್ಪ, ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ, ಉದ್ಯಮಿ ವೆಂಕಪ್ಪ ಪೂಜಾರಿ, ವಿರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್, ಸೋಮವಾರಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಹಾಸ, ಸಿದ್ದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ರಂಜನ್ ಬಿ.ವಿ., ಜಿಲ್ಲಾ ಉಪಾಧ್ಯಕ್ಷ ವಿಠಲ, ಉಪಾಧ್ಯಕ್ಷರಾದ ಬಿ.ಆರ್. ವಸಂತ್ ಹಾಗೂ ಜಗನ್ನಾಥ, ಕಾರ್ಯದರ್ಶಿ ಕೆ.ಎಸ್. ಲೋಹಿತ್, ಸಂಘಟನಾ ಕಾರ್ಯದರ್ಶಿ ಬಿ.ಎಸ್. ನಾಗರಾಜ್, ಕ್ರೀಡಾ ಕಾರ್ಯದರ್ಶಿ ಬಿ.ಎಸ್. ದಿಲೀಪ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ವಿವಿಧ ಪಕ್ಷಗಳ ಪ್ರಮುಖರು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ವರದಿ: ದುಗ್ಗಳ ಸದಾನಂದ










