ಸುಂಟಿಕೊಪ್ಪ, NEWS DESK ಆ.25: ಸುಂಟಿಕೊಪ್ಪದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದರೂ ಮುಸ್ಲಿಂ ಬಾಂಧವರು ಮಹಮ್ಮದ್ ಪೈಗಂಬರರ 1501ನೇ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯ ಸಂಕೇತವಾಗಿ ಸಡಗರ ಸಂಭ್ರಮದಿಂದ ಆಚರಿಸಿದರು. ಮಳೆಯನ್ನು ಲೆಕ್ಕಿಸದೆ ಸಣ್ಣಪುಟ್ಟ ಮಕ್ಕಳು, ಯುವಕರು ಹಾಗೂ ಹಿರಿಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.
ಮಂಗಳವಾರ ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಮಸೀದಿಗಳ ಮದರಸಗಳಲ್ಲಿ ವಿದ್ಯಾಭ್ಯಾಸ ನಡೆಸುವ ಮಕ್ಕಳಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಸೀದಿಗಳ ಮೌಲವಿಗಳು ಮುಸ್ಲಿಂ ಬಾಂಧವರಿಗೆ ಧಾರ್ಮಿಕ ಪ್ರವಚನಗಳನ್ನು ನೀಡಿದರು.
ಮಂಗಳವಾರ ಬೆಳಿಗ್ಗೆ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ವಿಶೇಷ ಉಡುಗೆಗಳನ್ನು ಧರಿಸಿ, ಹಾಡಿನೊಂದಿಗೆ ದಫ್ ಬಡಿಯುತ್ತಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶಾಲಾ ಮಕ್ಕಳು ಚಪ್ಪಾಳೆ ತಟ್ಟುತ್ತಾ, ಹೂಗುಚ್ಚ ಹಾಗೂ ಹಸಿರು ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಧ್ವನಿವರ್ಧಕದ ಮೂಲಕ ಮಹಮ್ಮದ್ ಪೈಗಂಬರರ ಶಾಂತಿ, ಸೌಹಾರ್ದತೆ ಹಾಗೂ ಆದರ್ಶ ಗುಣಗಳನ್ನು ಪ್ರಚುರಪಡಿಸಲಾಯಿತು. ವಾಹನಗಳನ್ನು ಕುತ್ತುಬಿನ್ನರ್ ಸೇರಿದಂತೆ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿತ್ತು.
ರಸ್ತೆ ಬದಿಯಲ್ಲಿ ಮುಸ್ಲಿಂ ಮಹಿಳೆಯರು ಗುಂಪು ಗುಂಪಾಗಿ ನಿಂತು ಶೋಭಾಯಾತ್ರೆಯನ್ನು ವೀಕ್ಷಿಸಿದರು. ಸಾರ್ವಜನಿಕರೂ ಶೋಭಾಯಾತ್ರೆಯನ್ನು ಸಂಭ್ರಮದಿಂದ ವೀಕ್ಷಿಸಿದರು.
ಸುಂಟಿಕೊಪ್ಪ ಮುಸ್ಲಿಂ ಜಮಾಯತ್‌ನ ನೌಷದ್ ಜುಹಾರಿ, ಸುನ್ನಿ ಹನಫಿ ಮುಸ್ಲಿಂ ಜಮೀಯ ಮಸೀದಿಯ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿ ಶಾಫಿ ಜುಮಾ ಮಸ್ಜಿದ್‌ನ ಧಾರ್ಮಿಕ ಮೌಲವಿ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ನ ಅಬ್ಧುಲ್ ಅಜೀಜ್ ಸಖಾಫಿ ಅವರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡು, ನಂತರ ನಡೆದ ಸಭಾ ಸಮಾರಂಭದಲ್ಲಿ ಧಾರ್ಮಿಕ ಪ್ರವಚನ ಹಾಗೂ ಆಶೀರ್ವಚನ ನೀಡಿದರು.








