ಮಡಿಕೇರಿ, NEWS DESK ಆ.25 : ದುಬಾರೆ ಮೀಸಲು ಅರಣ್ಯದಲ್ಲಿ ಯಾವುದೇ ಅನುಮತಿ ಇಲ್ಲದೆ ಬಂದೂಕಿನೊಂದಿಗೆ ಪ್ರವೇಶಿಸಿದ್ದ ಏಳು ಮಂದಿಯ ಪೈಕಿ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಮಡಿಕೇರಿ ವಿಭಾಗದ ಕುಶಾಲನಗರ ವಲಯದ ದುಬಾರೆ ಮೀಸಲು ಅರಣ್ಯದ ಮಾಲ್ದಾರೆ ಶಾಖಾ ವ್ಯಾಪ್ತಿಯ ದೊಡ್ಡಹಡ್ಡು ಭಾಗದಲ್ಲಿ ಆಗಸ್ಟ್ 23ರಂದು ಈ ಘಟನೆ ನಡೆದಿದೆ. ದೊಡ್ಡಹಡ್ಡು ಹಾಡಿಯ ಸಮೀಪದ ಮೀಸಲು ಅರಣ್ಯಕ್ಕೆ ಏಳು ಮಂದಿ ಯಾವುದೇ ಅನುಮತಿ ಇಲ್ಲದೆ ಬಂದೂಕಿನೊಂದಿಗೆ ಪ್ರವೇಶಿಸಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಾಲ್ದಾರೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಮಹಮ್ಮದ್ ಹನೀಫ್ (ಕೊಡಂಗೇರಿ ಗ್ರಾಮ, ವಿರಾಜಪೇಟೆ ತಾಲ್ಲೂಕು), ಸುರೇಶ ಪಿ.ವಿ. ಹಾಗೂ ಥೋಮಸ್ (ತ್ರಿಶೂರ್ ಜಿಲ್ಲೆ, ಕೇರಳ) ಎಂಬ ಮೂವರನ್ನು ಬಂಧಿಸಲಾಗಿದೆ.
ಬಂಧಿತರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದ್ದು, ತಪ್ಪಿಸಿಕೊಂಡು ಹೋದ ಇತರರ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ವಿರಾಜಪೇಟೆ ನ್ಯಾಯಾಲಯದಲ್ಲಿ ವನ್ಯಜೀವಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆ ವೇಳೆ ಬೇಟೆಗೆ ಸಂಬಂಧಿಸಿದ ವಸ್ತುಗಳು, ಕಾಡಿನಲ್ಲಿ ವಾಸ್ತವ್ಯ ಹೂಡಲು ಅಗತ್ಯವಿರುವ ಸಾಮಾಗ್ರಿಗಳು ಹಾಗೂ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.








