ವಿರಾಜಪೇಟೆ,NEWS DESK ಆ.25:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಲಾಗುತ್ತಿರುವ ವಿರಾಜಪೇಟೆ ತಾಲೂಕಿನ ಮದ್ಯಾವರ್ಜನಾ ಶಿಬಿರದ 2ನೇ ಹಂತದ ಪೂರ್ವಭಾವಿ ಸಭೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಅಂಗಳ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶಿಬಿರದ ಯಶಸ್ವಿ ನಿರ್ವಹಣೆಗೆ ಅಗತ್ಯವಿರುವ ಪೂರ್ವಸನ್ನಾಹಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಶಿಬಿರದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳಿಗೆ ಆಹ್ವಾನಿಸಬೇಕಾದ ಮುಖ್ಯ ಅತಿಥಿಗಳ ಆಯ್ಕೆ, ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಪದಾಧಿಕಾರಿಗಳು ಸುದೀರ್ಘ ವಿಚಾರ ವಿನಿಮಯ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲ್ಯಾನ್ ಅವರು, ತಮ್ಮ ಸುದೀರ್ಘ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಮದ್ಯಾವರ್ಜನಾ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ಹೇಗೆ ನಡೆಸಬೇಕು ಎಂಬ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಜನಜಾಗೃತಿ ಸಮಿತಿಯ ನಿಕಟಪೂರ್ವ ಅಧ್ಯಕ್ಷರು, ಸದಸ್ಯರಾದ ದಯಾ ಚಂಗಪ್ಪ, ಅವರು ಮಾತನಾಡಿ,”ಪ್ರತಿಯೊಬ್ಬರೂ ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಧರ್ಮಸ್ಥಳ ಕ್ಷೇತ್ರದ ಹಿರಿಮೆ-ಗರಿಮೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಸಂಸ್ಥೆಯ ಯೋಜನೆಯ ಮುಖಾಂತರ ಹಲವಾರು ನಿಸ್ವಾರ್ಥ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದು ಸಮಾಜಕ್ಕೆ ಅತ್ಯಂತ ಒಳಿತಾಗುವಂತಹ ಪವಿತ್ರ ಕಾರ್ಯಕ್ರಮ,”ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಜನಜಾಗೃತಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಗೌರವ ಸಲಹೆಗಾರರಾದ ಅರುಣ್ ಬಾನಂಗಡ, ಅವರು ಮಾತನಾಡಿ,”ಈ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಬೇಕಾದರೆ ಎಲ್ಲರ ಸಹಕಾರ ಅಗತ್ಯ. ಮದ್ಯಪಾನದಿಂದ ದೂರಾಗಬೇಕಾದ ಅರ್ಹ ವ್ಯಕ್ತಿಗಳನ್ನು ಗುರುತಿಸಿ, ಶಿಬಿರಕ್ಕೆ ಕರೆತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು,”ಎಂದು ಕರೆ ನೀಡಿದರು.
ಸಭೆಯಲ್ಲಿ ಶಿಬಿರದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರಾದ ಜೇಮ್ಸ್ ಮಾತನಾಡಿ, ನಾವೆಲ್ಲರೂ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವುದರೊಂದಿಗೆ ಈ ಶಿಬಿರದ ಯಶಸ್ವಿಗೆ ಕೈಜೋಡಿಸುವ. ಶಿಬಿರಕ್ಕೆ ಬೇಕಾಗುವ ಎಲ್ಲಾ ಪೂರ್ವ ತಯಾರಿಗಳನ್ನು ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಮಾಡುವ. ನಮ್ಮ ತಾಲೂಕನ್ನು ಪಾನಮುಕ್ತಗೊಳಿಸಲು ಪ್ರಯತ್ನಿಸೋಣ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ವಲಯಗಳ ಮೇಲ್ವಿಚಾರಕರು, ಪೋಷಕರು, ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿಯ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಸಂಘದ ಸದಸ್ಯರು ಭಾಗವಹಿಸಿ ಶಿಬಿರ ಯಶಸ್ವಿಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ಟಾಟು ಮೊಣ್ಣಪ್ಪ, ಪಳೆಯಂಡ ಪಾರ್ಥ ಚಿನ್ನಪ್ಪ, ಗೌರವ ಅಧ್ಯಕ್ಷರಾದ ಲಕ್ಷಿ÷್ಮ ಶಶಿಕಾಂತ್, ಉಪಾಧ್ಯಕ್ಷರಾದ ರಜೀತ ಕಾರ್ಯಪ್ಪ, ಕೌಶಿಕ್ ಕುಟ್ಟಯ್ಯ, ಕೋಶಾಧಿಕಾರಿ ಸುಮನ ಇದ್ದರು.
ವಲಯ ಮೇಲ್ವಿಚಾರಕರಾದ ಶಿವಕುಮಾರ್, ಧನೇಶ್, ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾ ಪ್ರತಿನಿಧಿ ಮೀನಾಕ್ಷಿ, ಸೇರಿದಂತೆ ವಿವಿಧ ವಲಯಗಳ ಸದಸ್ಯರು, ಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು, ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.








