
ಮಡಿಕೇರಿ NEWS DESK ಆ.27 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಆ.29 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಜಿ.ಕೆ ಹಾಗೂ ಯೋಗೇಶ್ ಹೆಚ್.ಎಸ್ ಅವರು ತಿಳಿಸಿದ್ದಾರೆ. ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ರೂ.36 ಸಾವಿರ ವೇತನ ಪಾವತಿಸಬೇಕು, ಹೊರಗುತ್ತಿಗೆ ವ್ಯವಸ್ಥೆ ಬದಲಾಗಿ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿಸಬೇಕು ಹಾಗೂ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಆದೇಶವನ್ನು ರದ್ದುಪಡಿಸಬೇಕು. ರಾಜ್ಯ ಸರಕಾರ 2026ರ ಮೇ 22ರಂದು ಪ್ರಕಟಿಸಿರುವ ಕನಿಷ್ಠ ವೇತನವನ್ನು ಬಿಸಿಎಂ, ಎಸ್‌ಸಿ, ಎಸ್‌ಟಿ, ಕ್ರೆöÊಸ್ತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನಿಷ್ಠ ವೇತನ ಜಾರಿ ಕುರಿತಂತೆ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯನ್ನು ರದ್ದುಪಡಿಸಬೇಕು. ಹೊರಗುತ್ತಿಗೆ ನೌಕರರ ಹಕ್ಕುಗಳು ಮತ್ತು ವೇತನ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯಲಾಗುವುದೆಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.









