ಸೋಮವಾರಪೇಟೆ, NEWS DESK ಆ.27: ಈದ್ ಮಿಲಾದ್ ಪ್ರೀತಿ, ಶಾಂತಿ, ಸಹನೆ, ಮಾನವೀಯತೆ ಮತ್ತು ಸಹೋದರತ್ವದ ಸಂದೇಶವನ್ನು ನೆನಪಿಸುವ ಮಹತ್ವದ ಪವಿತ್ರ ದಿನವಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಸಮೀಪದ ಬಜೆಗುಂಡಿ ಗ್ರಾಮದ ಖಿಳಾರಿಯ ಮಸಿದಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯರು ಪರಸ್ಪರ ಗೌರವದಿಂದ, ಯಾವುದೇ ಭೇದಭಾವವಿಲ್ಲದೆ ಬದುಕಬೇಕು ಎಂಬ ಸಂದೇಶ ಹಬ್ಬದ ನಿಜವಾದ ಆಶಯವಾಗಿದೆ. ನಮ್ಮ ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಇಂತಹ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಧರ್ಮಗಳ ಜನರು ಪರಸ್ಪರ ಗೌರವದಿಂದ ಬದುಕಿದಾಗ ಮಾತ್ರ ಸುಂದರ ಮತ್ತು ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ, ಅವರ ಜೀವನವನ್ನು ಅವರು ಮುನ್ನೆಡೆಸುವಂತಾದಾಗ ಅವರಿಗೆ ಮದುವೆ ಮಾಡಿದಲ್ಲಿ ಅವರ ಜೀವನ ಸುಗಮವಾಗಿ ನಡೆಯುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮಸೀದಿಯ ಅಭಿವೃದ್ಧಿಗೆ 10 ಲಕ್ಷ ರೂ.ಗಳನ್ನು ಶಾಸಕರ ನಿಧಿಯಿಂದ ನೀಡಲಾಗುವುದು. ಸ್ಮಶಾನಕ್ಕೆ ಸ್ಥಳ ಮೀಸಲಿಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಈದ್ ಮಿಲಾದ್ ಎಂದರೆ ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಸ್ಮರಿಸುವ ಪವಿತ್ರ ದಿನ. ಇದು ಕೇವಲ ಹಬ್ಬದ ಆಚರಣೆಯಲ್ಲ, ಪ್ರವಾದಿ ಮುಹಮ್ಮದ್ ಅವರು ತಮ್ಮ ಜೀವನದ ಮೂಲಕ ಸತ್ಯ, ನ್ಯಾಯ, ದಯೆ, ಕ್ಷಮೆ ಮತ್ತು ಬಡವರ ಬಗ್ಗೆ ಕಾಳಜಿ ವಹಿಸುವ ಮಹತ್ವವನ್ನು ಸಾರಿದರು.
ಬಡವರು, ನಿರ್ಗತಿಕರು ಮತ್ತು ಸಂಕಷ್ಟದಲ್ಲಿರುವವರನ್ನು ನೆರವಾಗುವುದು, ನೆರೆಹೊರೆಯವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು ಮತ್ತು ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವುದು ಈ ಹಬ್ಬದ ಆಶಯವಾಗಿದೆ.
ಕಾರ್ಯಕ್ರಮವನ್ನು ಮಸೀದಿಯ ಧರ್ಮಗುರುಗಳಾದ ನೌಷಾದ್ ಫೌಜಿ ಉದ್ಘಾಟಿಸಿದರು. ಧರ್ಮಗುರು ಶಮೀರ್ ಫೌಜಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಆರ್‌ಟಿಒ ಆಲಿ ಹುಸೇನ್, ಈಚೆಗೆ ನೇಪಾಳದಲ್ಲಿ ನಡೆದ ಕರಾಟೆಯಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಾದ ಅಫೀಜ್ ಮತ್ತು ಯಾಸಿನ್, ಸಮಾಜದ ಮಹಮ್ಮದ್ ಇಸಾನ್, ಕೆ.ಎಂ. ಸುಲೈಮಾನ್, ನಿಯಾಜ್, ಇಬ್ರಾಹಿಂ, ಬೀರಾನ್ ಕುಟ್ಟಿ, ಅನಿಫ್, ಕೆ.ಎಸ್. ಅಬ್ಬಾಸ್, ರಷೀದ್, ಮುನೀರ್, ಮುಸ್ತಾಫ, ನಾಸೀರ್, ಇಸ್ಮಾಯಿಲ್ ಅವರುಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.








