ಮಡಿಕೇರಿ, NEWS DESK ಆ.27: ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ತಾಣದ ರಕ್ಷಣೆ ಹಾಗೂ ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ ಕುರಿತು ಕೊಡಗು ಜಿಲ್ಲೆಯ ವಿವಿಧ ಹಾಲಿ-ಮಾಜಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಗಣ್ಯರ ಸಭೆ ಮಡಿಕೇರಿಯ ರಾಜ್ಯದರ್ಶನ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕೊಡಗು-ಮೈಸೂರು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನ, ಅರಣ್ಯ ಹಾಗೂ ಖಾಸಗಿ ಜಮೀನುಗಳ ರಕ್ಷಣೆ ಮತ್ತು ಜಿಲ್ಲೆಯ ರೈತರ ಹಿತಾಸಕ್ತಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕೊಡಗು ಜಿಲ್ಲೆಯಲ್ಲಿ ಹಿಂದಿನಿಂದಲೂ ಕಾಡು ಹಾಗೂ ಪರಿಸರವನ್ನು ಉಳಿಸಿ ರಕ್ಷಿಸಿಕೊಂಡು ಬರಲಾಗಿದ್ದು, ಪರಿಸರ ಸಂರಕ್ಷಣೆಗೆ ವಿರೋಧವಿಲ್ಲ. ಆದರೆ ಕಸ್ತೂರಿರಂಗನ್ ವರದಿಯನ್ನು ಕೇರಳ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
* ಪ್ರತಿ ಗ್ರಾಮದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ಜನವಸತಿ ಪ್ರದೇಶ, ರೈತರು ಈಗಾಗಲೇ ಕೃಷಿ ಮಾಡುತ್ತಿರುವ ಜಮೀನು ಹಾಗೂ ಅರಣ್ಯದ ಗಡಿಯನ್ನು ಸ್ಪಷ್ಟವಾಗಿ ಗುರುತಿಸಬೇಕು.
* ಅರಣ್ಯದ ಗಡಿಯ ಹೊರಭಾಗದಲ್ಲಿ ಪ್ರತ್ಯೇಕ ಬಫರ್ ಜೋನ್ ಗುರುತಿಸಬಾರದು. ಬಫರ್ ವಲಯವನ್ನು ಅರಣ್ಯದ ಗಡಿಗೆ ‘0’ ಕಿ.ಮೀ.ಗೆ ಸೀಮಿತಗೊಳಿಸಬೇಕು.
* ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ನಡೆಸುವಂತೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳಿಗೆ ಸೂಚಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
* ಅರಣ್ಯದ ಅಂಚಿನಲ್ಲಿ ವಾಸಿಸುವ ರೈತರು, ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಬಡ ಜನರು ಹಾಗೂ ಕೃಷಿ ಮತ್ತು ಮೂಲಭೂತ ಸೌಕರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು.
* ಪಶ್ಚಿಮ ಘಟ್ಟದ ಅರಣ್ಯ ಹಾಗೂ ಖಾಸಗಿ ಜಮೀನುಗಳಲ್ಲಿ ಕಾಡು ಮತ್ತು ಮರಗಳನ್ನು ಸಂರಕ್ಷಿಸುವುದರಿಂದ ಕರ್ನಾಟಕ ಹಾಗೂ ತಮಿಳುನಾಡಿನ ಲಕ್ಷಾಂತರ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಅಗತ್ಯವಾದ ನೀರು ದೊರೆಯುತ್ತಿದೆ. ಆದರೆ ಅತಿಯಾದ ಮಳೆ, ಶೀತ ವಾತಾವರಣ, ಕೊಳೆರೋಗ ಹಾಗೂ ಅತಿವೃಷ್ಟಿಯಿಂದ ಕೊಡಗಿನ ರೈತರು ಬೆಳೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ನೀರನ್ನು ಬಳಸುವ ಪ್ರದೇಶಗಳಿಂದ ನೀರಿನ ಕರ ಹಾಗೂ ವಿದ್ಯುತ್ ಕರದ ಮೂಲಕ ರಾಯಲ್ಟಿ ಸಂಗ್ರಹಿಸಿ ಕೊಡಗಿನ ರೈತರಿಗೆ ಪರಿಹಾರ ಮತ್ತು ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ನಿರ್ಣಯಿಸಲಾಯಿತು.
* ಸಿ ಮತ್ತು ಡಿ ಜಮೀನುಗಳು ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯಾಗಿದ್ದು, ಈಗಾಗಲೇ ಅನೇಕ ಫಲಾನುಭವಿಗಳಿಗೆ ಮನೆ ನಿರ್ಮಾಣ ಹಾಗೂ ಕೃಷಿಗಾಗಿ ಹಕ್ಕುಪತ್ರ ನೀಡಲಾಗಿದೆ. ಆದ್ದರಿಂದ ಇಂತಹ ಜಮೀನುಗಳನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಗೆ ವರ್ಗಾಯಿಸಬಾರದು. ಈಗಾಗಲೇ ವರ್ಗಾಯಿಸಿದ್ದರೆ ಅವುಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.
* ಈ ಹಿಂದೆ ರಚಿಸಲಾಗಿದ್ದ ಹೋರಾಟ ಸಮಿತಿಯನ್ನು ಮುಂದುವರಿಸುವುದು ಹಾಗೂ ಅಗತ್ಯವಿದ್ದಲ್ಲಿ ಸಂಸದರು, ಶಾಸಕರು, ವಿವಿಧ ಪಕ್ಷಗಳ ಪ್ರಮುಖರು, ವಿವಿಧ ಸಮಾಜಗಳ ಮುಖಂಡರು, ರೈತ ಸಂಘಟನೆಗಳು, ಬೆಳೆಗಾರರ ಹೋರಾಟ ಸಮಿತಿಗಳು ಹಾಗೂ ಇತರ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಸಮಿತಿಯನ್ನು ರಚಿಸುವ ನಿರ್ಣಯ ಕೈಗೊಳ್ಳಲಾಯಿತು.
* ಅರಣ್ಯ ಇಲಾಖೆ ಉಲ್ಲೇಖಿಸುವ 1905ರ ರಾಜರ ಕಾಲದ ಸೆಕ್ಷನ್ 4 ಅನ್ನು ಕೂಡಲೇ ರದ್ದುಪಡಿಸಬೇಕು ಎಂದು ಸಭೆ ಆಗ್ರಹಿಸಿತು.
* ಸಭೆಯಲ್ಲಿ ಕೈಗೊಂಡ ಎಲ್ಲಾ ನಿರ್ಣಯಗಳನ್ನು ಒಳಗೊಂಡ ಸಮಗ್ರ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಕಸ್ತೂರಿರಂಗನ್ ವರದಿಯ ಅನುಷ್ಠಾನದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ ಕೊಡಗಿನ ರೈತರು, ಬೆಳೆಗಾರರು ಹಾಗೂ ಅರಣ್ಯದ ಅಂಚಿನಲ್ಲಿ ವಾಸಿಸುವ ಜನರ ಹಕ್ಕುಗಳು ಮತ್ತು ಜೀವನೋಪಾಯಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಭೆಯ ಪ್ರಮುಖ ಒತ್ತಾಯವಾಗಿತ್ತು.







