
ಮಡಿಕೇರಿ, ಆ.27 NEWS DESK : ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ‘ಎ’ ವರ್ಗೀಕರಣ ಪಡೆದುಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ರೂ.29 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ತಿಳಿಸಿದರು.
ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಕೊಡಗು ಜಿಲ್ಲಾದ್ಯಂತ ಕಾರ್ಯವ್ಯಾಪ್ತಿ ಹೊಂದಿದ್ದು, ಪ್ರಸ್ತುತ 2,165 ಸದಸ್ಯರನ್ನು ಹೊಂದಿದೆ. ರೂ.1.12 ಕೋಟಿ ಪಾಲು ಬಂಡವಾಳ, ರೂ.6.74 ಕೋಟಿ ಠೇವಣಿ ಹಾಗೂ ರೂ.5.73 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮನೆ ಸಾಲ, ಕೃಷಿ ಸಾಲ, ಕೃಷಿಯೇತರ ದೀರ್ಘಾವಧಿ ಸಾಲ, ಠೇವಣಿಗಳ ಮೇಲಿನ ಸಾಲ ಹಾಗೂ ಆಭರಣ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶೇ.97ರಷ್ಟು ಸಾಲ ವಸೂಲಾತಿ ಮಾಡಲಾಗಿದ್ದು, ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ರೂ.3.32 ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.
ಸಂಘವು ರೂ.29 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ಸಭೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ, ಮರಣನಿಧಿ ಹೆಚ್ಚಳ, ಹೆಚ್ಚಿನ ಡಿವಿಡೆಂಡ್ ನೀಡುವುದು, ಸಾಲ ಸೌಲಭ್ಯ ವಿಸ್ತರಣೆ ಹಾಗೂ ಠೇವಣಿ ಸಂಗ್ರಹಣೆ ಹೆಚ್ಚಿಸುವುದು ಸೇರಿದಂತೆ ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಮಹಾಸಭೆಯಲ್ಲಿ ಚರ್ಚೆ ನಡೆಯಿತು. ಸಂಘದ ಉಪಾಧ್ಯಕ್ಷ ಕೊಳುವಂಡ ಬಿ. ಉತ್ತಪ್ಪ, ನಿರ್ದೇಶಕರಾದ ಚೋವಂಡ ಡಿ. ಕಾಳಪ್ಪ, ಅಂಜಪರವಂಡ ಉಷಾ, ಕೊಂಗಂಡ ಎ. ತಿಮ್ಮಯ್ಯ, ನಂದೇಟಿರ ರಾಜಾ ಮಾದಪ್ಪ, ಕೇಕಡ ಎಂ. ಸುಗುಣ, ಶಾಂತೆಯಂಡ ಟಿ. ದೇವರಾಜ್, ನಾಪನೆರವಂಡ ಎ. ಪೊನ್ನಮ್ಮ, ಡಾ. ಸಣ್ಣುವಂಡ ಎಂ. ಕಾವೇರಪ್ಪ, ಮೇದುರ ಪಿ. ಕಾವೇರಪ್ಪ, ಚೆರುಮಂದಂಡ ಜಿ. ಪೊನ್ನಪ್ಪ, ಕಾಂಡೆರ ಯು. ಕುಟ್ಟಪ್ಪ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಳ್ಳೇಂಗಡ ನೀಮಾರಂಜನ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು. ಚೆಟ್ರಂಡ ವಸಂತಿ ಪೂರ್ಣಚ್ಚ ಪ್ರಾರ್ಥಿಸಿದರು. ಕುಡುವಂಡ ಬಿ. ಉತ್ತಪ್ಪ ವಂದಿಸಿದರು.









