

ಮಡಿಕೇರಿ NEWS DESK ಆ.29 : ಪರಿಷ್ಕರಣೆ ಮಾಡಿರುವ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾ ಅಧ್ಯಕ್ಷ ದಿನೇಶ್ ಜಿ.ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ್ ಎಚ್.ಎಸ್. ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರೂಪ್ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್‌ಗಳು, ಡಾಟಾ ಎಂಟ್ರಿ ಆಪರೇಟರ್‌ಗಳು ಹಾಗೂ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸೂಕ್ತ ವೇತನ ಮತ್ತು ಸೇವಾ ಭದ್ರತೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರಕಾರ ಮತ್ತು ಕಾರ್ಮಿಕ ಇಲಾಖೆ ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ವಿಳಂಬವಿಲ್ಲದೆ ಜಾರಿಗೊಳಿಸಬೇಕು. ತಿಂಗಳಿಗೆ ಕನಿಷ್ಠ ರೂ.36 ಸಾವಿರ ವೇತನ ನೀಡಬೇಕು. ಹೊರಗುತ್ತಿಗೆ ನೌಕರರಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕಲ್ಪಿಸಿ, ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿಯೇ ಖಾಯಂಗೊಳಿಸಬೇಕು ಹಾಗೂ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿಸಬೇಕು. ಇದರೊಂದಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿ, ಬಾಕಿ ವೇತನ ಬಿಡುಗಡೆ, ವಾರಕ್ಕೆ ಒಂದು ದಿನ ರಜೆ, ಕೆಲಸದ ಸಮಯ ನಿಗದಿ, ಅಪಘಾತ ಸಂದರ್ಭದಲ್ಲಿ ಚಿಕಿತ್ಸೆ ಮತ್ತು ಪರಿಹಾರ, ವೇತನ ಚೀಟಿ, ನೇಮಕಾತಿ ಆದೇಶ, ಗುರುತಿನ ಚೀಟಿ, ಸೇವಾ ಪ್ರಮಾಣಪತ್ರ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಕಲ್ಪಿಸಬೇಕು.
ಹಾಸ್ಟೆಲ್ ಸಿಬ್ಬಂದಿ ಕಡಿತದ ಆದೇಶ ರದ್ದುಪಡಿಸಿ, 50 ವಿದ್ಯಾರ್ಥಿಗಳಿಗೆ ಮೂವರು ಸಿಬ್ಬಂದಿ ನೇಮಿಸುವ ಹಿಂದಿನ ವ್ಯವಸ್ಥೆ ಮುಂದುವರಿಸಬೇಕು. ಹೊರಗುತ್ತಿಗೆ ಅತಿಥಿ ಶಿಕ್ಷಕರಿಗೂ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಮಹಿಳಾ ಹೊರಗುತ್ತಿಗೆ ನೌಕರರಿಗೆ ಋತುಚಕ್ರದ ರಜೆ ಹಾಗೂ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. ದಸರಾ ಮತ್ತು ಬೇಸಿಗೆ ರಜೆಯ ಅವಧಿಯಲ್ಲಿಯೂ ವೇತನ ನೀಡಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ ಪರಿಹಾರ ನೀಡಬೇಕು ಸೇರಿದಂತೆ ಒಟ್ಟು 21 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ವಾಣಿ, ಸಂತೋಷ, ಪಲ್ಲವಿ, ಶಾಮಲಾ, ಇಂದಿರಾ, ಜ್ಯೋತಿ, ಸುನಿತಾ, ಮಂಗಳ, ಜಯಮಾಲಾ, ವೇದಾವತಿ, ಸುನಿತಾ, ಚಿನ್ನಪ್ಪ, ಹರೀಶ, ರವಿ, ವಸಂತ್, ಸಂಘದ ಪದಾಧಿಕಾರಿಗಳು ಹಾಗೂ ಹೊರಗುತ್ತಿಗೆ ನೌಕರರು ಭಾಗವಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.









