

ಮಡಿಕೇರಿ NEWS DESK ಸೆ.1 : ಮ್ಯಾನ್ಯುಯಲ್ ಸ್ಕ್ರಾವೆಂಜರ್ ಗಳ (ಮಲ ಹೊರುವ ಕಾರ್ಮಿಕರು) ಸಮಗ್ರ ಸಮೀಕ್ಷೆ, ಗುರುತಿಸುವಿಕೆ, ಪುನರ್ವಸತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಆ.24ರಿಂದ ಸೆ.2ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ಜಾಥಾ ಇಂದು ಕೊಡಗು ಜಿಲ್ಲೆಯನ್ನು ತಲುಪಿತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಪಿ.ಇ.ಎಂ.ಎಸ್.ಆರ್. ಕಾಯ್ದೆ 2013ರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮ್ಯಾನ್ಯುಯಲ್ ಸ್ಕ್ರಾವೆಂಜರ್ ಗಳ ಸಮಗ್ರ ಹಾಗೂ ಪಾರದರ್ಶಕ ಸಮೀಕ್ಷೆ ನಡೆಸಿ, ಗುರುತಿಸಲ್ಪಟ್ಟ ಪ್ರತಿಯೊಬ್ಬರಿಗೂ ಸಂಪೂರ್ಣ ಪುನರ್ವಸತಿ ಕಲ್ಪಿಸಬೇಕು ಎಂದು ಸಮಿತಿಯ ಪ್ರಮುಖರು ಒತ್ತಾಯಿಸಿದರು. ಮನೆ ಅಥವಾ ನಿವೇಶನವಿಲ್ಲದ ಕುಟುಂಬಗಳಿಗೆ ಉಚಿತ ನಿವೇಶನ ಅಥವಾ ಪಕ್ಕಾ ಮನೆ, ಅರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ಶಾಶ್ವತ ಪರ್ಯಾಯ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ಕೌಶಲ್ಯ ತರಬೇತಿ, ಉಪಕರಣ, ಬಂಡವಾಳ ಹಾಗೂ ಆರ್ಥಿಕ ನೆರವು ನೀಡಬೇಕು. ಗುರುತಿಸಲ್ಪಟ್ಟ ಕುಟುಂಬಗಳಿಗೆ ಆರೋಗ್ಯ ವಿಮೆ ಮತ್ತು ಆರೋಗ್ಯ ಕಾರ್ಡ್, ಕೆಲಸ ಮಾಡಲು ಅಸಮರ್ಥರಿಗೆ ಮಾಸಿಕ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು. ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿ ವಸತಿ ಶಾಲೆ, ಉನ್ನತ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ಕಲ್ಪಿಸಬೇಕು. ಸಫಾಯಿಕರ್ಮಚಾರಿ ಮತ್ತು ಮ್ಯಾನ್ಯುಯಲ್ ಸ್ಕ್ರಾವೆಂಜರ್ ಗಳ ವಸತಿ ಪ್ರದೇಶಗಳಲ್ಲಿ ಮಕ್ಕಳಿಗಾಗಿ ‘ಭೀಮ ಶಾಲೆ’ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು. ಮಲದಗುಂಡಿಗಳಲ್ಲಿ ಉಸಿರುಗಟ್ಟಿ ಮೃತಪಟ್ಟವರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಹಾಗೂ ಸೂಕ್ತ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸಬೇಕು. ವೃತ್ತಿಯಲ್ಲಿ ಮುಂದುವರಿಯಲು ಇಚ್ಛಿಸುವವರಿಗೆ ಆಧುನಿಕ ಯಂತ್ರೋಪಕರಣಗಳನ್ನು ಉಚಿತವಾಗಿ ನೀಡಿ ತರಬೇತಿ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳ ನಿರ್ವಹಣಾ ಕಾರ್ಯಗಳನ್ನು ಗುರುತಿಸಲ್ಪಟ್ಟ ಸ್ಕ್ರಾವೆಂಜರ್ ಕುಟುಂಬಗಳಿಗೆ ನೀಡಬೇಕು ಎಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ಸಫಾಯಿಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅಗತ್ಯ ಅನುದಾನ ಒದಗಿಸಿ, ಸ್ಕಾçವೆಂಜರ್ ಗಳ ಪುನರ್ವಸತಿಗಾಗಿ ಪ್ರತ್ಯೇಕ ಕೋಶ ರಚಿಸಬೇಕು. ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ, ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಎಲ್ಲ ಬೇಡಿಕೆಗಳ ಕುರಿತು ಚರ್ಚಿಸಲು ಮ್ಯಾನ್ಯುಯಲ್ ಸ್ಕ್ರಾವೆಂಜರ್ ಗಳ ರಾಜ್ಯ ಮೇಲ್ವಿಚಾರಣಾ ಸಮಿತಿಯ ಸಭೆಯನ್ನು ತಕ್ಷಣ ಕರೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ರಾಜ್ಯ ಸಂಚಾಲಕ ಡಾ.ಕೆ.ವಿ.ಓಬಳೇಶ, ಸದಸ್ಯ ಡಾ.ಆರ್.ವಿ.ಚಂದ್ರಶೇಖರ್ ಹಾಗೂ ಕೊಡಗು ಜಿಲ್ಲಾಧ್ಯಕ್ಷ ರಂಗಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.









