
ಮಡಿಕೇರಿ, ಆ.31 NEWS DESK : ಕೊಡಗು ಜಿಲ್ಲೆಯಲ್ಲಿ 2025-26 ಹಾಗೂ 2026-27ನೇ ಸಾಲಿನಲ್ಲಿ ಪ್ರಸ್ತುತ ದಿನಾಂಕದವರೆಗೆ ಒಟ್ಟು 899 ಆಹಾರ ಮಾದರಿಗಳನ್ನು ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯದಲ್ಲಿ (Chief Food Analyst, Division Food Laboratory, Mysore) ವಿಶ್ಲೇಷಿಸಲಾಗಿದೆ. ಈ ಪೈಕಿ 4 ಆಹಾರ ಮಾದರಿಗಳು ಅಸುರಕ್ಷಿತ ಹಾಗೂ 2 ಆಹಾರ ಮಾದರಿಗಳು ಕಡಿಮೆ ಗುಣಮಟ್ಟದವು (Sub-standard) ಎಂದು ವರದಿಯಾಗಿದೆ. ಅಸುರಕ್ಷಿತ ಆಹಾರ ಪದಾರ್ಥಗಳನ್ನು ತಯಾರಿಸಿ ಅಥವಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಿ ಅಥವಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮ-2011ರ ಸೆಕ್ಷನ್ 51ರಡಿ ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳ ಮುಂದೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು ರೂ.10 ಸಾವಿರ ದಂಡ ವಿಧಿಸಲಾಗಿದೆ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮಸಾಲೆ ಪದಾರ್ಥಗಳು (ಸ್ಪೈಸಸ್) ಹಾಗೂ ಚಾಕೊಲೇಟ್‌ಗಳ ಮಾರಾಟ ಮಾಡುತ್ತಿರುವ ಅಂಗಡಿಗಳು ಮತ್ತು ಘಟಕಗಳ ತಪಾಸಣೆ ನಡೆಸಿದ ಸಂದರ್ಭದಲ್ಲಿ, ಆಹಾರ ಪರವಾನಗಿ ಪಡೆಯದಿರುವುದು ಹಾಗೂ ಲೇಬಲಿಂಗ್ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು 17 ಅಂಗಡಿಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್ 52ರಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು ರೂ.85 ಸಾವಿರ ದಂಡ ವಿಧಿಸಲಾಗಿದೆ. ಇದಲ್ಲದೆ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳಲ್ಲಿ ಕಾಯ್ದೆಯ ಸೆಕ್ಷನ್ 56 ಮತ್ತು 63ರಡಿ ಒಟ್ಟು ರೂ.40 ಸಾವಿರ ದಂಡ ವಿಧಿಸಲಾಗಿದೆ. ಅಂಕಿತಾಧಿಕಾರಿಗಳ ನೋಟಿಸ್‌ಗಳು ಹಾಗೂ ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ 2025-26 ಹಾಗೂ 2026-27ನೇ ಸಾಲಿನಲ್ಲಿ ಪ್ರಸ್ತುತ ದಿನಾಂಕದವರೆಗೆ ಒಟ್ಟು ರೂ.1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಇ. ತಿಳಿಸಿದ್ದಾರೆ.









