ಸುಂಟಿಕೊಪ್ಪ, NEWS DESK ಆ.31: ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಿ, ಅವರಿಗೆ ಸಂಕಷ್ಟಗಳು ಎದುರಾದಾಗ ಪುರುಷ ಸಮಾಜ ಬೆಂಬಲವಾಗಿ ನಿಂತು, ಸಹೋದರಿಯರ ಸಮಸ್ಯೆಗಳನ್ನು ನಿವಾರಿಸಲು ಮುಂದಾದಾಗ ಮಾತ್ರ ರಕ್ಷಾಬಂಧನದ ಆಶಯ ಸಾರ್ಥಕವಾಗುತ್ತದೆ ಎಂದು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್ ಹೇಳಿದರು.
ಮಂಜನಾಥಯ್ಯ–ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಾರಾಯಣ ಗುರು ಬಿಲ್ಲವ ಸೇವಾ ಸಂಘ, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ತಮ್ಮ ಮನೆಯ ಸಹೋದರಿಯ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಎಲ್ಲರೂ ಸಿದ್ಧರಿರಬೇಕು. ಈ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ. ಪ್ರತಿಯೊಬ್ಬ ಸಹೋದರನು ತನ್ನ ಸಹೋದರಿಯ ರಕ್ಷಣೆಗೆ ಮುಂದಾದರೆ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದು ಅವರು ಹೇಳಿದರು.
ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮಣಿಮುಖೇಶ್ ಮಾತನಾಡಿ, ‘ಒಂದೇ ಕುಲ, ಮನುಜರೆಲ್ಲ ಒಂದೇ’ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಾತೀಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗದವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ನಾರಾಯಣ ಗುರುಗಳ ಸಾಧನೆಯ ಪ್ರತೀಕವಾಗಿದೆ. ಸಮುದಾಯದ ಏಳಿಗೆಗೆ ಅವರು ನೀಡಿದ ಕೊಡುಗೆ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸಮಿತಿಯ ಸದಸ್ಯರು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ. ಮಣಿಮುಖೇಶ್ ವಹಿಸಿದ್ದರು. ಬಿಲ್ಲವ ಸಂಘದ ಸಲಹಾ ಸಮಿತಿ ಸದಸ್ಯರಾದ ಡಾ. ಯಶೋಧರ ಪೂಜಾರಿ, ಕೆ.ಪಿ. ಜಗನ್ನಾಥ್, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಪೂರ್ಣಿಮಾ ರವಿ, ಬಿ.ಎಂ. ಚಂದ್ರ, ಸುರೇಶ್ ಪೂಜಾರಿ ಕೊಡಗರಹಳ್ಳಿ, ಗೀತಾ ವಿಶ್ವನಾಥ್, ಕುಮಾರ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.







