ಮಡಿಕೇರಿ, NEWS DESK ಸೆ.1 : ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮ ಭಾಗಮಂಡಲ ಕುಂದಚೇರಿ ಗ್ರಾಮದಲ್ಲಿ ಸಣ್ಣ ಪ್ರಮಾಣದ ಬೆಟ್ಟ ಕುಸಿತ ಸಂಭವಿಸಿದೆ.
ಕುಂದಚೇರಿ ಗ್ರಾಮದ ಪೂವಲಮಣಿ ಎಂಬಲ್ಲಿ ಮಣ್ಣು ಹಾಗೂ ಸಣ್ಣ ಗಾತ್ರದ ಕಲ್ಲುಗಳು ಬೆಟ್ಟದ ಮೇಲ್ಭಾಗದಿಂದ ಕೆಳಕ್ಕೆ ಕುಸಿದು ಬಿದ್ದಿವೆ. ಬೆಟ್ಟದ ಕೆಳಭಾಗದಲ್ಲಿ ಜನವಸತಿ ಇದ್ದು ಗ್ರಾಮಸ್ಥರು ಆತಂಕಗೊAಡಿದ್ದಾರೆ.
ಮಾಹಿತಿ ತಿಳಿದ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಟ್ಟದ ಪ್ರಸ್ತುತ ಸ್ಥಿತಿ, ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಹಾಗೂ ಸ್ಥಳದಲ್ಲಿರುವ ನೈಜ ಸ್ಥಿತಿಯ ಕುರಿತು ನಿವಾಸಿಗಳಿಂದ ಮಾಹಿತಿ ಕಲೆ ಹಾಕಿದರು. ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಬೆಟ್ಟದ ಕೆಳಭಾಗದಲ್ಲಿ ವಾಸವಾಗಿದ್ದ ಎರಡು ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮಳೆ ಮುಂದುವರೆದಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಕುಂದಚೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.








