ಸುಂಟಿಕೊಪ್ಪ, NEWS DESK ಸೆ.೦1 : ಸುಂಟಿಕೊಪ್ಪ ಹೋಬಳಿಯಲ್ಲಿ ಮಿತಿಮೀರಿರುವ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಹೋಬಳಿ ರೈತಸಂಘವು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರಿಗೆ ಮನವಿ ಸಲ್ಲಿಸಿದೆ.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಭಾಂಗಣದಲ್ಲಿ ನಡೆದ ಮಾನವ-ವನ್ಯಜೀವಿ ಸಂಘರ್ಷ ಕುರಿತ ಸಭೆಯಲ್ಲಿ ರೈತಸಂಘದ ಅಧ್ಯಕ್ಷ ನಾಗಚೆಟ್ಟಿರ ಸ. ಪೊನ್ನಪ್ಪ ಅವರು ಮನವಿ ಸಲ್ಲಿಸಿದರು. ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಶ್ವತ ಆನೆ ತಡೆಗೋಡೆ ಹಾಗೂ ಸೌರಬೇಲಿ ನಿರ್ಮಾಣ, ಆನೆಗಳ ಸಂಚಾರ ಮಾರ್ಗಗಳ ಗುರುತಿಸುವಿಕೆ, ಬೆಳೆ ಹಾನಿಗೆ ಸಮಗ್ರ ಪರಿಹಾರ, 24×7 ಮುನ್ನೆಚ್ಚರಿಕೆ ವ್ಯವಸ್ಥೆ, ಅರಣ್ಯ ಇಲಾಖೆ–ರೈತರ ಸಮನ್ವಯ ಸಮಿತಿ ರಚನೆ ಸೇರಿದಂತೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ವಿಶೇಷ ಕಾರ್ಯಯೋಜನೆ ರೂಪಿಸಿ ತುರ್ತಾಗಿ ಅನುಷ್ಠಾನಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.








