ಮಾದಾಪುರ, NEWS DESK ಸೆ. 5: ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ವಿಶಾಖಪಟ್ಟಣಂ ಹಾಗೂ ಗೋದಾವರಿ ಗುಡ್ಡಗಾಡು ಪ್ರಾಂತ್ಯಗಳ ಮಾದರಿಯಲ್ಲಿ ಸಂವಿಧಾನದ 5ನೇ ಪರಿಚ್ಛೇದದ ಅಡಿಯಲ್ಲಿ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದೊಂದೇ ಆದಿಮಸಂಜಾತ ಕೊಡವರು ಎದುರಿಸುತ್ತಿರುವ ಭೌಗೋಳಿಕ-ರಾಜಕೀಯ ದುರಂತಕ್ಕೆ ಪರಿಹಾರ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದರು.
ಮಾದಾಪುರದಲ್ಲಿ ಶನಿವಾರ ಆಯೋಜಿಸಿದ್ದ ಸಿಎನ್‌ಸಿಯ 2ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿಮಸಂಜಾತ ಕೊಡವರನ್ನು ಸಂವಿಧಾನದ ಅಡಿಯಲ್ಲಿ ವಿಶಿಷ್ಟ ಪ್ರಕೃತಿ ಆರಾಧಕ ಧಾರ್ಮಿಕ ಸಮುದಾಯವೆಂದು ಗುರುತಿಸಿ, ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಸ್ವಯಂ-ಆಡಳಿತದ ಭದ್ರತೆ ನೀಡಿದರೆ ಮಾತ್ರ ಕೊಡವರ ಜಮೀನು, ಜಲ, ಸಂಸ್ಕೃತಿ, ಪರಂಪರೆ, ಪರಿಸರ ಮತ್ತು ಜೀವವೈವಿಧ್ಯವನ್ನು ರಕ್ಷಿಸಲು ಸಾಧ್ಯ ಎಂದರು.
ಕೊಡವರ ಪವಿತ್ರ ಕ್ಷೇತ್ರಗಳಾದ ಮಂದ್, ವಿಶಿಷ್ಟ ಕೊಡವ ವಂಶಾವಳಿ ಹಾಗೂ ಸಾಂಪ್ರದಾಯಿಕ ತಾಯ್ನಾಡಿನ ಇತಿಹಾಸವನ್ನು ಮುನ್ನೆಲೆಗೆ ತರಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಸಿಎನ್‌ಸಿ ವತಿಯಿಂದ ಕೊಡವ ಪ್ರಾಂತದಾದ್ಯಂತ ಶಾಂತಿಯುತ ಮಾನವ ಸರಪಳಿ ಮೂಲಕ ಕೊಡವ ಜನಾಂಗೀಯ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸಂವಿಧಾನದ 371ನೇ ವಿಧಿ ಹಾಗೂ 5ನೇ ಮತ್ತು 6ನೇ ಪರಿಚ್ಛೇದಗಳ ಅಡಿಯಲ್ಲಿ ಸ್ವಯಂ ಆಡಳಿತ, ಮೂಲನಿವಾಸಿ ಸಮುದಾಯವಾಗಿ ಸಾಂವಿಧಾನಿಕ ರಕ್ಷಣೆ ಮತ್ತು ವಿಶೇಷ ಮನ್ನಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎನ್‌ಸಿ ಮುಂದಿಟ್ಟಿದೆ.
ಕೊಡವರ ಸಾಂಪ್ರದಾಯಿಕ ‘ಕೋವಿ-ತೋಕ್’ ಸಂಪ್ರದಾಯದ ಮುಂದುವರಿಕೆಗೆ ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ರಕ್ಷಣೆ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ‘ಸಂಘ’ ಕ್ಷೇತ್ರದ ಮಾದರಿಯಲ್ಲಿ ಕೊಡವರಿಗೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಪ್ರತ್ಯೇಕ ಶಾಸಕಾಂಗ ಪ್ರಾತಿನಿಧ್ಯ ನೀಡಬೇಕು ಎಂದು ನಾಚಪ್ಪ ಆಗ್ರಹಿಸಿದರು.
ಕಾವೇರಿ ನದಿಯ ನೀರಿನಲ್ಲಿ ಕೊಡವರಿಗೆ ಸಿಂಹಪಾಲು ದೊರೆಯಬೇಕು. ತಲಕಾವೇರಿಯನ್ನು ಕೊಡವರ ಪವಿತ್ರ ಯಾತ್ರಾಸ್ಥಳವೆಂದು ಗುರುತಿಸಬೇಕು. ದೇವಟ್‌ಪರಂಬು ನರಮೇಧ ನಡೆದ ಸ್ಥಳ ಸೇರಿದಂತೆ ಕೊಡವರ ಐತಿಹಾಸಿಕ ದುರಂತಗಳ ನೆನಪಿಗಾಗಿ ಅಂತರರಾಷ್ಟ್ರೀಯ ನರಮೇಧ ಸ್ಮಾರಕ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.
ಕೊಡವರ ಪವಿತ್ರ ಮಂದ್‌ಗಳು, ದೇವರಕಾಡುಗಳು ಹಾಗೂ ಇತರ ಪಾರಂಪರಿಕ ತಾಣಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು. ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಐತಿಹಾಸಿಕವಾಗಿ ಕೊಡವರಿಂದ ಕಳೆದುಹೋದ ಪೂರ್ವಜರ ಭೂಮಿಯನ್ನು ಮೂಲನಿವಾಸಿಗಳ ಭೂಹಕ್ಕುಗಳ ಆಧಾರದ ಮೇಲೆ ಮರಳಿ ಕೊಡವರಿಗೇ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದರು.
*ಕೊಡವ ಗುರುತಿನ ಪ್ರತ್ಯೇಕ ದಾಖಲಾತಿಗೆ ಒತ್ತಾಯ*
1871–72ರಿಂದ 1941ರ ಜನಗಣತಿಯವರೆಗೆ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವೆಂದು ಗುರುತಿಸಲಾಗುತ್ತಿತ್ತು. 1941ರ ನಂತರ ಈ ಅಸ್ಮಿತೆಯನ್ನು ಅಳಿಸಿ ದೊಡ್ಡ ಸಮುದಾಯಗಳೊಂದಿಗೆ ವಿಲೀನಗೊಳಿಸಲಾಗಿದ್ದು, ಇದರಿಂದ ಕೊಡವರು ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುವಂತಾಯಿತು ಎಂದು ನಾಚಪ್ಪ ಹೇಳಿದರು.
1956ರವರೆಗೆ ‘ಪಾರ್ಟ್ ಸಿ’ ಕೊಡಗು ರಾಜ್ಯವಾಗಿ ಅಸ್ತಿತ್ವದಲ್ಲಿತ್ತು. ರಾಜ್ಯ ಪುನರ್ವಿಂಗಡಣಾ ಕಾಯ್ದೆಯಡಿ ಕೊಡಗನ್ನು ಕರ್ನಾಟಕಕ್ಕೆ ಸೇರಿಸಿರುವುದು ಕೊಡವರ ಪಾಲಿನ ಐತಿಹಾಸಿಕ ಅನ್ಯಾಯವಾಗಿದ್ದು, 1941ರ ಜನಗಣತಿಯಲ್ಲಿ ಕೊಡವ ಗುರುತಿನ ನಾಶ ಹಾಗೂ 1956ರ ವಿಲೀನವು ಕೊಡವರ ಅಸ್ಮಿತೆಗೆ ಗಂಭೀರ ಹೊಡೆತ ನೀಡಿದೆ ಎಂದು ಅವರು ಆರೋಪಿಸಿದರು.
*ಭೂ ಪರಿವರ್ತನೆ ವಿರುದ್ಧ ಆಕ್ರೋಶ*
ಕರ್ನಾಟಕ ಭೂ ಕಂದಾಯ ಹಾಗೂ ಭೂ ಸುಧಾರಣಾ ಕಾಯ್ದೆಗಳಿಗೆ ಮಾಡಲಾದ ತಿದ್ದುಪಡಿಗಳ ಪರಿಣಾಮ ಕೊಡಗಿನಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಹೆಚ್ಚಾಗಿದೆ. ಹೊರಗಿನ ಬಂಡವಾಳಶಾಹಿಗಳು, ವ್ಯಾಪಾರ ಸಂಸ್ಥೆಗಳು ಟೌನ್‌ಶಿಪ್, ರೆಸಾರ್ಟ್‌ಗಳು ಮತ್ತು ಲೇಔಟ್‌ಗಳಿಗಾಗಿ ಭೂಮಿ ಖರೀದಿಸುತ್ತಿರುವುದರಿಂದ ಕಾವೇರಿ ಜಲಮೂಲಗಳು, ಕೃಷಿ ಭೂಮಿ, ಕಾಫಿ ತೋಟಗಳು ಹಾಗೂ ನೈಸರ್ಗಿಕ ಪರಿಸರಕ್ಕೆ ಅಪಾಯ ಎದುರಾಗಿದೆ ಎಂದು ಅವರು ದೂರಿದರು.
ಕೊಡಗಿನ ವಿವಿಧ ಭಾಗಗಳಲ್ಲಿ ಬೆಟ್ಟಗುಡ್ಡಗಳನ್ನು ಕೊರೆದು, ಬ್ಲಾಸ್ಟಿಂಗ್ ನಡೆಸಿ ನೈಸರ್ಗಿಕ ಹಳ್ಳ, ಕೊಳ್ಳ, ತೊರೆ ಹಾಗೂ ಸಿಹಿನೀರಿನ ಬುಗ್ಗೆಗಳಿಗೆ ಹಾನಿ ಮಾಡಲಾಗುತ್ತಿದೆ. ಕೊಡಗಿನ ಪರಿಸರ ಮತ್ತು ಕಾವೇರಿ ಜಲಾನಯನ ಪ್ರದೇಶವನ್ನು ಸಂರಕ್ಷಿಸಲು ವಾಣಿಜ್ಯ ಉದ್ದೇಶದ ಭೂ ಪರಿವರ್ತನೆಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.
ಕೊಡವ ನೆಲ, ಜಲ, ಪರಿಸರ ಹಾಗೂ ಜೀವವೈವಿಧ್ಯವನ್ನು ರಕ್ಷಿಸಲು ಕೊಡವಲ್ಯಾಂಡ್‌ಗೆ ಸ್ವಯಂ-ಶಾಸಕಾಂಗ ಭದ್ರತೆಯೊಂದಿಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಈ ಉದ್ದೇಶದಿಂದ ಸಿಎನ್‌ಸಿ ಜನಜಾಗೃತಿ ಆಂದೋಲನವನ್ನು ಮುಂದುವರಿಸಲಿದೆ ಎಂದು ನಾಚಪ್ಪ ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ್ದವರು ಗುರು-ಕಾರೋಣರು, ಸೂರ್ಯ-ಚಂದ್ರರು, ಭೂಮಿತಾಯಿ, ವನದೇವತೆ, ಜಲದೇವತೆ ಕಾವೇರಿ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸಿಎನ್‌ಸಿಯ ಹೋರಾಟಕ್ಕೆ ಬೆಂಬಲಿಸುವ ಸಂಕಲ್ಪ ಮಾಡಿದರು. ರಾಷ್ಟ್ರಗೀತೆ ‘ಜನ ಗಣ ಮನ’ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಉದ್ದಿನಾಡಂಡ ಮುತ್ತಕ್ಕಿ, ಪಾಸುರ ರಜನಿ ರಾಜ, ಮೇದರ ಪ್ರತೀಕ ಕಂಠಿ, ಕನ್ನಿಕಂಡ ಜಾನಕಿ, ಬಾಳೆಯಡ ಪೊನ್ನಮ್ಮ, ಮಂಡಿರ ಪೂವಮ್ಮ ಸೇರಿದಂತೆ ಹಲವು ಪ್ರಮುಖರು ಹಾಗೂ ಸಿಎನ್‌ಸಿ ಬೆಂಬಲಿಗರು ಪಾಲ್ಗೊಂಡಿದ್ದರು.
*ಸೆ.19ರಂದು ಚೆಟ್ಟಳ್ಳಿಯಲ್ಲಿ ಮಾನವ ಸರಪಳಿ*
ಸಿಎನ್‌ಸಿ ವತಿಯಿಂದ ಮುಂದಿನ ಮಾನವ ಸರಪಳಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 19ರಂದು ಚೆಟ್ಟಳ್ಳಿಯಲ್ಲಿ ಆಯೋಜಿಸಲಾಗುವುದು ಎಂದು ನಾಚಪ್ಪ ಹೇಳಿದರು.








