ಕುಶಾಲನಗರ NEWS DESK ಸೆ.05: ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಹಂಪ್‌ಗಳು ವಾಹನ ಚಾಲಕರಿಗೆ ಸರಿಯಾಗಿ ಗೋಚರಿಸದೆ ಸರಣಿ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕ ರಸ್ತೆ ಸುರಕ್ಷತಾ ಕಾರ್ಯಕ್ಕೆ ಮುಂದಾಗಿದೆ.
ಸಾರ್ವಜನಿಕರಿಂದ ನಿರಂತರವಾಗಿ ಬರುತ್ತಿದ್ದ ಅಪಘಾತಗಳ ದೂರುಗಳಿಗೆ ಸ್ಪಂದಿಸಿದ ಸಂಘಟನೆಯ ಪದಾಧಿಕಾರಿಗಳು ಸ್ವತಃ ರಸ್ತೆಗಿಳಿದು ಕುಶಾಲನಗರ ತಾಲೂಕಿನ ವಿವಿಧ ಪ್ರಮುಖ ರಸ್ತೆಗಳಲ್ಲಿರುವ ಹಂಪ್‌ಗಳಿಗೆ ಬಿಳಿ ಬಣ್ಣ ಬಳಿಯುವ ಮೂಲಕ ಗಮನ ಸೆಳೆದರು.
ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್‌ಗೆ ತೆರಳುವ ರಸ್ತೆಯ ಸಮೀಪದಲ್ಲಿದ್ದ ಹಂಪ್‌ಗೆ ಮೊದಲಿಗೆ ಬಣ್ಣ ಬಳಿಯಲಾಯಿತು. ವಾಹನಗಳು ವೇಗವಾಗಿ ಸಂಚರಿಸುವ ಈ ರಸ್ತೆಯಲ್ಲಿ ಹಂಪ್‌ಗಳು ಸರಿಯಾಗಿ ಕಾಣಿಸದೆ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಬಣ್ಣ ಬಳಿದ ಬಳಿಕ ದೂರದಿಂದಲೇ ಹಂಪ್‌ಗಳು ವಾಹನ ಚಾಲಕರಿಗೆ ಸ್ಪಷ್ಟವಾಗಿ ಗೋಚರಿಸುವಂತಾಗಿದೆ.
ಇದೇ ರೀತಿಯಲ್ಲಿ ಕುಶಾಲನಗರ ಹಳೆ ಮಾರ್ಕೆಟ್ ರಸ್ತೆಯ ಎರಡು ಹಂಪ್‌ಗಳು, ಐಬಿ ರಸ್ತೆಯ ಎರಡು ಹಂಪ್‌ಗಳು ಹಾಗೂ ಸೋಮವಾರಪೇಟೆ ಮುಖ್ಯ ರಸ್ತೆಯ ಒಂದು ಹಂಪ್ ಸೇರಿದಂತೆ ಒಟ್ಟು ಆರು ಹಂಪ್‌ಗಳಿಗೆ ಬಿಳಿ ಬಣ್ಣ ಬಳಿಯಲಾಯಿತು.
ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಫ್ರೆಡ್ಡಿ, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ಉಪಾಧ್ಯಕ್ಷ ನಾಸಿರ್, ಕಾರ್ಮಿಕ ಘಟಕದ ಅಧ್ಯಕ್ಷ ಆರ್. ಚಂದ್ರು, ಉಪಾಧ್ಯಕ್ಷ ಮಣಿಕಂಠ, ಸಂಚಾಲಕ ವಿಪಿ ಚಂದ್ರಶೇಖರ್, ಕೂಡಿಗೆ ವಲಯ ಅಧ್ಯಕ್ಷೆ ನಿಶಾ, ಸುಂಟಿಕೊಪ್ಪ ಹೋಬಳಿ ಯುವ ಘಟಕದ ಅಧ್ಯಕ್ಷ ಕ್ಲಿಫರ್ಡ್ ರೊಡ್ರಿಗಸ್ ಸೇರಿದಂತೆ ಅಂತೋಣಿ, ನಂಜಪ್ಪ, ವಿಲ್ಸನ್, ಬಾಲಕೃಷ್ಣ, ಖಾಸಿಂ, ಜೈರುದ್ದೀನ್ ಹಾಗೂ ಇನ್ನಿತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕಾದ ರಸ್ತೆ ಸುರಕ್ಷತಾ ಕ್ರಮವನ್ನು ಸಂಘಟನೆಯೇ ಸ್ವಯಂಪ್ರೇರಿತವಾಗಿ ಕೈಗೊಂಡಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಂಪ್‌ಗಳಿಗೆ ನಿಯಮಾನುಸಾರ ಬಣ್ಣ ಬಳಿದು, ಅಪಘಾತ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.







