
ಮಡಿಕೇರಿ NEWS DESK ಸೆ.7 : ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ರಾಷ್ಟ್ರ ನಿರ್ಮಾಣದ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಮಡಿಕೇರಿ ರೋಟರಿ ಅಧ್ಯಕ್ಷ ರೋಟೇರಿಯನ್ ಮನೋಹರ್ ಕಾಮತ್ ಅವರು ಬಣ್ಣಿಸಿದ್ದಾರೆ. ಮಡಿಕೇರಿ ರೋಟರಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಸಭಾಂಗಣದಲ್ಲಿ ನಡೆದ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ರೋ. ಮನೋಹರ್ ಕಾಮತ್ ಅವರು, ಶಿಕ್ಷಕರು ಸಮಾಜದ ದಾರಿದೀಪವಾಗಿದ್ದಾರೆ ಎಂದರು. ಭಾರತದ ಪ್ರಥಮ ಉಪರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಶಿಸ್ತು ಮತ್ತು ಸಂಸ್ಕಾರಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ರೋ. ಎಂ.ಜಿ. ಡಾ. ಎ.ಜಿ. ಪಾಟ್ಕರ್ ಅವರು ಮಾತನಾಡಿ, ನಮ್ಮ ಕಾಲದಲ್ಲಿ ಸೈಕಲ್‌ನಲ್ಲಿ ಶಾಲೆಗೆ ಹೋಗಿ ಶಿಕ್ಷಕರನ್ನು ಪೋಷಕರಂತೆ ಗೌರವಿಸಿ ಆತ್ಮೀಯತೆಯಿಂದ ಶಿಕ್ಷಣ ಪಡೆಯುತ್ತಿದ್ದೆವು. ಆದರೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಶಿಕ್ಷಣದ ಸ್ವರೂಪ ಬದಲಾಗಿದ್ದು, ಶಿಕ್ಷಕರ ಜವಾಬ್ದಾರಿ ಹಾಗೂ ಒತ್ತಡವೂ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂತೋಷ, ನೆಮ್ಮದಿ, ಉತ್ತಮ ನಿದ್ರೆ ಹಾಗೂ ಒತ್ತಡಮುಕ್ತ ಮನಸ್ಸು ಅಗತ್ಯ. ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಆತ್ಮೀಯ ಬಾಂಧವ್ಯವೇ ಉತ್ತಮ ಶಿಕ್ಷಣದ ಶಕ್ತಿಯಾಗಿದೆ ಎಂದು ಅವರು ಹೇಳಿದರು. ರೋ. ಡಾ. ರವಿ ಅಪ್ಪಾಜಿ ಅವರು ತಮ್ಮ ಬಾಲ್ಯದ ವಿದ್ಯಾಭ್ಯಾಸದ ದಿನಗಳನ್ನು ಸ್ಮರಿಸಿಕೊಂಡು, ಗುರುಗಳ ಮಾರ್ಗದರ್ಶನ ಹಾಗೂ ನಿರಂತರ ಪರಿಶ್ರಮದಿಂದ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಯಿತು. ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣವೇ ಭದ್ರವಾದ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಕನಸು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಿಕ್ಷಕಿ ಎಂ. ವನಜಾ ಅವರು ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಸುವುದಲ್ಲ. ಪರಿಪೂರ್ಣ ವ್ಯಕ್ತಿತ್ವ ರೂಪಿಸಿ ಉತ್ತಮ ನಾಗರಿಕರನ್ನು ನಿರ್ಮಿಸುವ ಮಹತ್ತರ ಕಾರ್ಯವಾಗಿದೆ ಎಂದರು. ಕಪ್ಪು ಹಲಗೆಯಿಂದ ಆರಂಭವಾದ ಶಿಕ್ಷಣ ಇಂದು ಸ್ಮಾರ್ಟ್ ಕ್ಲಾಸ್ ಹಾಗೂ ಡಿಜಿಟಲ್ ತಂತ್ರಜ್ಞಾನದ ಯುಗಕ್ಕೆ ಬೆಳೆದಿದೆ. ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 27 ವರ್ಷಗಳ ಶಿಕ್ಷಕ ವೃತ್ತಿಯ ಸೇವಾನುಭವ ಹೊಂದಿರುವ ಶಿಕ್ಷಕಿ ವೀಣಾ ರೈ ಅವರು ಸನ್ಮಾನ ಸ್ವೀಕರಿಸುತ್ತಿರುವುದು ಹೆಮ್ಮೆ ಹಾಗೂ ಸಂತೋಷದ ಕ್ಷಣವಾಗಿದೆ ಎಂದರು. ಪಿಎಂ ಶ್ರೀ ಶಾಲೆಗಳಲ್ಲಿ ದೊರೆಯುತ್ತಿರುವ ಸೌಲಭ್ಯಗಳು, ಪಠ್ಯೇತರ ಚಟುವಟಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಕಾಳಜಿಯಿಂದ ಸರ್ಕಾರ ಒದಗಿಸುತ್ತಿರುವ ಪೌಷ್ಟಿಕ ಆಹಾರ, ಪುಸ್ತಕ ಮತ್ತು ಸಮವಸ್ತ್ರದಂತಹ ಸೌಲಭ್ಯಗಳನ್ನು ಶ್ಲಾಘಿಸಿದರು. ವಿಶೇಷ ಮಕ್ಕಳಿಗೂ ಅಗತ್ಯ ಸೌಲಭ್ಯಗಳು ದೊರೆಯುತ್ತಿರುವುದು ಸಂತಸದ ವಿಚಾರ ಎಂದರು. ಶಿಕ್ಷಕರ ದಿನಾಚರಣೆ ಅಂಗವಾಗಿ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್‌ಗೆ ಆಯ್ಕೆಯಾದ ಎಂ. ವನಜಾ ಅವರಿಗೆ ರೋಟೇರಿಯನ್ ಡಾ. ಪಾಟ್ಕರ್ ಹಾಗೂ ರೋ. ಮಲ್ಲಿಗೆ ಪೈ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಅವರ ಪರಿಚಯವನ್ನು ರೋ. ಹರಿಣಿ ವಿಜಯ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ವೀಣಾ ರೈ ಅವರಿಗೆ ರೋಟೇರಿಯನ್ ಅನಂತ್ ಸುಬ್ಬರಾವ್ ಹಾಗೂ ಪಾರ್ವತಿ ಚೀಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪರಿಚಯವನ್ನು ರೋ. ಲಲಿತಾ ರಾಘವನ್ ಮಾಡಿದರು. ಕಾರ್ಯಕ್ರಮದಲ್ಲಿ ರೋಟರಿಯ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್ ಉಪಕ್ರಮಗಳ ಅವಲೋಕನವನ್ನು ರೋ. ಡಿ.ಎಂ. ಕಿರಣ್ ನಡೆಸಿಕೊಟ್ಟರು. ರೋಟರಿ ಕಾರ್ಯದರ್ಶಿ ರೋ. ಸೋಮಣ್ಣ ಬಿ.ಎಂ. ವಂದಿಸಿದರು.









