ಮಡಿಕೇರಿ, NEWS DESK ಸೆ.7: ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಫೋನಿಕ್ಸ್ ಮಾಡೆಲ್ ಹಂಟ್–2026 ಫ್ಯಾಷನ್ ಶೋನಲ್ಲಿ ಮಡಿಕೇರಿ ಬಳಿಯ ಕರ್ಣಂಗೇರಿ ಗ್ರಾಮದ ಯುವಕ ಪಳೆಯಂಡ ಕುಶಾಲ್ ಪ್ರಥಮ ಸ್ಥಾನ ಪಡೆದು ‘ಫೋನಿಕ್ಸ್ ಮೆಗಾ ಮಾಡೆಲ್–2026’ ಆಗಿ ಆಯ್ಕೆಯಾಗಿದ್ದಾರೆ.
ದೇಶದ ಹೆಸರಾಂತ ಕೋರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಅವರ ನೇತೃತ್ವದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ದೇಶದ ವಿವಿಧ ಭಾಗಗಳಿಂದ 1 ಸಾವಿರಕ್ಕೂ ಅಧಿಕ ಯುವಕ–ಯುವತಿಯರು ಪಾಲ್ಗೊಂಡಿದ್ದರು. ಬುದ್ಧಿಮತ್ತೆ, ಸೌಂದರ್ಯ, ಚತುರತೆ, ಮಾಡೆಲಿಂಗ್ ಕೌಶಲ್ಯ ಹಾಗೂ ವ್ಯಕ್ತಿತ್ವದ ಆಧಾರದ ಮೇಲೆ ಸ್ಪರ್ಧೆಯ ವಿವಿಧ ಹಂತಗಳಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು.
ಅಂತಿಮ ಹಂತದಲ್ಲಿ ಕರ್ಣಂಗೇರಿ ಗ್ರಾಮದ ನಿವಾಸಿ ಪಳೆಯಂಡ ಕಿಶನ್ ಸುಬ್ಬಯ್ಯ ಹಾಗೂ ರೂಪಾ ಸುಬ್ಬಯ್ಯ ದಂಪತಿಯ ಪುತ್ರ ಕುಶಾಲ್ ಪ್ರಥಮ ಸ್ಥಾನ ಗಳಿಸುವ ಮೂಲಕ ಫೋನಿಕ್ಸ್ ಮೆಗಾ ಮಾಡೆಲ್–2026 ಪ್ರಶಸ್ತಿಗೆ ಭಾಜನರಾದರು.
ಭಾರತೀಯ ಮಾಡೆಲಿಂಗ್ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕುಶಾಲ್ ‘ಬೆಸ್ಟ್ ರನ್‌ವೇ’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
ತಮ್ಮ ಆಸಕ್ತಿ ಹಾಗೂ ಹವ್ಯಾಸವಾಗಿರುವ ಮಾಡೆಲಿಂಗ್ ಕ್ಷೇತ್ರದಲ್ಲಿ ಇಂತಹ ಮಹತ್ವದ ವೇದಿಕೆಯಲ್ಲಿ ಹೆಜ್ಜೆ ಹಾಕಲು ಅವಕಾಶ ದೊರೆತಿರುವುದು ತಮ್ಮ ಭಾಗ್ಯ ಎಂದು ಕುಶಾಲ್ ಸಂತಸ ವ್ಯಕ್ತಪಡಿಸಿದರು. ನೂರಾರು ಸ್ಪರ್ಧಿಗಳ ನಡುವೆ ಪ್ರಥಮ ಸ್ಥಾನ ದೊರೆತಿರುವುದು ಅಪಾರ ಹೆಮ್ಮೆ ತಂದಿದೆ. ಭವಿಷ್ಯದಲ್ಲಿ ದೇಶದ ಫ್ಯಾಷನ್ ಲೋಕದಲ್ಲಿ ಮತ್ತಷ್ಟು ಭದ್ರವಾಗಿ ಬೇರೂರಲು ಈ ಪ್ರಶಸ್ತಿ ಬುನಾದಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.








