ಸುಂಟಿಕೊಪ್ಪ, NEWS DESK ಸೆ. 8: ಯೇಸುಕ್ರಿಸ್ತರ ತಾಯಿ ಕನ್ಯಾಮಾತೆ ಮರಿಯಮ್ಮನವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಮೊಂತಿಪೆಸ್ತ್ (ತೆನೆಹಬ್ಬ)ವನ್ನು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಬೆಳಿಗ್ಗೆ 7.30ರಿಂದ ವಿಶೇಷ ಪ್ರಾರ್ಥನೆ ಹಾಗೂ ಅಡಂಬರ ದಿವ್ಯ ಬಲಿಪೂಜೆ ನೆರವೇರಿತು. ಮಡಿಕೇರಿ ಸಂತ ಮರಡಿಯೂರು ದೇವಾಲಯದ ಧರ್ಮಗುರು ರೇ. ಫಾ. ಜಾರ್ಜ್ ದೀಪಕ್, ಮೈಸೂರಿನ ಧರ್ಮಕೇಂದ್ರದ ಧರ್ಮಗುರು ರೇ. ಫಾ. ಸಿಲ್ವೆಮುತ್ತು ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ. ಫಾ. ವಿಜಯಕುಮಾರ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಇದಕ್ಕೂ ಮುನ್ನ ಒಂಬತ್ತು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧರ್ಮಕೇಂದ್ರಗಳ ಧರ್ಮಗುರುಗಳ ನೇತೃತ್ವದಲ್ಲಿ ದಿವ್ಯಬಲಿಪೂಜೆ, ಪ್ರಭೋದನೆ, ನೊವೇನಾ ಪ್ರಾರ್ಥನೆ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮಗಳು ನಡೆದವು. ನೊವೇನಾ ಸಂದರ್ಭದಲ್ಲಿ ಕನ್ಯಾಮಾತೆ ಮರಿಯಮ್ಮನವರ ಸ್ವರೂಪಕ್ಕೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಿ ವಿಶೇಷವಾಗಿ ಅಲಂಕರಿಸಲಾಯಿತು.
ಹಬ್ಬದ ದಿನದಂದು ಮೊಂಬತ್ತಿ ಹಿಡಿದು ಮಾತೆ ಮರಿಯಮ್ಮನವರ ಸ್ವರೂಪದೊಂದಿಗೆ ಮೆರವಣಿಗೆ ನಡೆಸಿ, ಸಂತ ಮೇರಿ ಶಾಲಾ ಆವರಣದಲ್ಲಿ ಸ್ವರೂಪವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ನೂರಾರು ಕ್ರೈಸ್ತ ಬಾಂಧವರು ವಿವಿಧ ಬಗೆಯ ಪುಷ್ಪಗಳನ್ನು ಸಮರ್ಪಿಸಿ ಶ್ರದ್ಧಾಭಕ್ತಿಯಿಂದ ಪುಷ್ಪನಮನ ಸಲ್ಲಿಸಿದರು.
ಮೊಂತಿಪೆಸ್ತ್ ಹಬ್ಬದ ಪ್ರಮುಖ ಅಂಗವಾಗಿ ನೂತನ ಭತ್ತದ ತೆನೆಗಳನ್ನು ಆಶೀರ್ವದಿಸಿ ಭಕ್ತರಿಗೆ ವಿತರಿಸಲಾಯಿತು. ಮನೆ ಮನೆಗಳಲ್ಲಿ ಈ ಹೊಸ ತೆನೆಗಳನ್ನು ತಾವು ತಯಾರಿಸುವ ವಿವಿಧ ಖಾದ್ಯಗಳೊಂದಿಗೆ ಸೇರಿಸಿ ಸೇವಿಸುವುದು ಹಬ್ಬದ ವಿಶೇಷತೆಯಾಗಿದೆ.
ಇದೇ ಸಂದರ್ಭದಲ್ಲಿ ಐದು ವರ್ಷದ ಬಾಲಕಿಯರಿಂದ ಹಿಡಿದು ಯುವತಿಯರವರೆಗೆ ಮಾತೆ ಮರಿಯಮ್ಮನವರ ಪ್ರತಿರೂಪದ ವಸ್ತ್ರಾಲಂಕಾರ ಸ್ಪರ್ಧೆ ನಡೆಯಿತು. ವಿವಿಧ ವಿನ್ಯಾಸದ ವಸ್ತ್ರಗಳಲ್ಲಿ ಭಾಗವಹಿಸಿದ ಮಕ್ಕಳು ಹಾಗೂ ಯುವತಿಯರು ನೆರೆದಿದ್ದ ಭಕ್ತರ ಗಮನ ಸೆಳೆದರು.
ವಿಶೇಷ ಪ್ರಭೋದನೆಯನ್ನು ಮೈಸೂರು ಧರ್ಮಕೇಂದ್ರದ ಧರ್ಮಗುರು ರೇ. ಫಾ. ಸಿಲ್ವೆಮುತ್ತು ನೆರವೇರಿಸಿದರು. ಅಡಂಬರ ಬಲಿಪೂಜೆಯನ್ನು ರೇ. ಫಾ. ಜಾರ್ಜ್ ದೀಪಕ್ ಹಾಗೂ ರೇ. ಫಾ. ವಿಜಯಕುಮಾರ್ ನೆರವೇರಿಸಿದರು. ಬಳಿಕ ಭಕ್ತರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು, ಪಾಲನಾ ಸಮಿತಿಯ ಪದಾಧಿಕಾರಿಗಳು, ವಿನ್ಸೆಂಟ್ ಡಿ’ಪೌಲ್, ಮರಿಯಮ್ಮ ಸೇನೆ, ಸೋಲಾಮ್ ಬ್ರದರ್ಸ್ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಕ್ರೈಸ್ತ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರಿಗೆ ಬೆಳಗಿನ ಉಪಾಹಾರವನ್ನು ವಿತರಿಸಲಾಯಿತು.







