ಮಡಿಕೇರಿ, NEWS DESK ಸೆ.8 : ಕೊಡಗು ಜಿಲ್ಲೆ ಶೇ.93ರಷ್ಟು ಸಾಕ್ಷರತೆ ಸಾಧಿಸಿದ್ದು, ಕೆಲವೇ ದಿನಗಳಲ್ಲಿ ಜಿಲ್ಲೆಯನ್ನು ‘ಸಂಪೂರ್ಣ ಸಾಕ್ಷರತಾ ಜಿಲ್ಲೆ’ ಎಂದು ಘೋಷಿಸಲಾಗುವುದು ಎಂದು ಜಿಲ್ಲಾ ಸಾಕ್ಷರತಾ ನೋಡಲ್ ಅಧಿಕಾರಿ ಡಾ. ಹೇಮಂತ್ ರಾಜ್ ಹೇಳಿದರು.
ಕುಶಾಲನಗರದ ಪಿ.ಎಂ.ಶ್ರೀ ಶಾಲೆಯಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ನವಸಾಕ್ಷರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಾಕ್ಷರತಾ ಕ್ಷೇತ್ರದಲ್ಲಿ ಕೊಡಗು ಜಿಲ್ಲೆ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣ ಶೇ.54ರಿಂದ ಆರಂಭವಾಗಿ ಇದೀಗ ಶೇ.75ಕ್ಕೆ ತಲುಪಿದೆ. ಇದರಲ್ಲಿ ಕೊಡಗು ಜಿಲ್ಲೆ ಶೇ.93ರಷ್ಟು ಸಾಕ್ಷರತೆ ಸಾಧಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಸಾಕ್ಷರತಾ ಕಾರ್ಯಕ್ರಮದ ಮೂಲಕ ಅಕ್ಷರಜ್ಞಾನದಿಂದ ವಂಚಿತರಾಗಿರುವವರನ್ನು ಮುಖ್ಯವಾಹಿನಿಗೆ ತರುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ನವಸಾಕ್ಷರರು ಕೇವಲ ತಮ್ಮ ಹೆಸರನ್ನು ಬರೆಯಲು ಅಥವಾ ಸಹಿ ಮಾಡಲು ಕಲಿತರೆ ಸಾಲದು. ದೇಶದ ಅಭಿವೃದ್ಧಿಗೆ ನೆರವಾಗುವಂತಹ ಶಿಕ್ಷಣ ಮತ್ತು ಜ್ಞಾನವನ್ನು ಪಡೆದುಕೊಳ್ಳಬೇಕು. ಜನರು ಸಾಕ್ಷರರಾಗುವುದರ ಜೊತೆಗೆ ಅವರ ಬದುಕಿಗೆ ಅಕ್ಷರಜ್ಞಾನ ಬೆಳಕಾಗಬೇಕು. ಸಾಕ್ಷರತೆ ಸಾಧಿಸಿದವರನ್ನು ಒಂದೆಡೆ ಸೇರಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವೂ ಮಹತ್ವದ್ದಾಗಿದೆ ಎಂದು ಡಾ. ಹೇಮಂತ್ ರಾಜ್ ಹೇಳಿದರು.
ಸಾಕ್ಷರತಾ ಕಾರ್ಯಕ್ರಮದಡಿ ನವಸಾಕ್ಷರರಿಗೆ ‘ಬಾಳಿಗೆ ಬೆಳಕು’ ಮತ್ತು ‘ಸವಿ ಬರಹ’ ಎಂಬ ಎರಡು ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಬಿಆರ್‌ಸಿ, ಬಿಆರ್‌ಪಿ ಹಾಗೂ ಸಿಆರ್‌ಪಿಗಳ ಪರಿಶ್ರಮ ಮಹತ್ವದ್ದಾಗಿದೆ ಎಂದು ಅವರು ಶ್ಲಾಘಿಸಿದರು.
ದ್ವಿಭಾಷಾ ಚಟುವಟಿಕೆಗಳ ಕೊಠಡಿ ಉದ್ಘಾಟನೆ
ಡಯಟ್ ಉಪನಿರ್ದೇಶಕ (ಅಭಿವೃದ್ಧಿ) ರಾಮಚಂದ್ರೇ ರಾಜೇ ಅರಸ್ ಅವರು ಪಿ.ಎಂ.ಶ್ರೀ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಪಿ.ಎಂ.ಶ್ರೀ ದ್ವಿಭಾಷಾ ಚಟುವಟಿಕೆಗಳ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರ ಸತತ ಪರಿಶ್ರಮದಿಂದ ಕೊಠಡಿ ನಿರ್ಮಾಣಗೊಂಡಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಇದು ಸಹಕಾರಿಯಾಗಲಿದೆ ಎಂದರು.
15 ವರ್ಷ ಪೂರ್ಣಗೊಂಡ ಅಕ್ಷರಜ್ಞಾನವಿಲ್ಲದವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಸಾಕ್ಷರತಾ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ. ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲು ಬಿಆರ್‌ಸಿ, ಬಿಆರ್‌ಪಿ ಹಾಗೂ ಸಿಆರ್‌ಪಿಗಳು ವಹಿಸುತ್ತಿರುವ ಶ್ರಮ ಶ್ಲಾಘನೀಯ ಎಂದು ಹೇಳಿದರು.
ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಜರ್ಮನಿ, ಅಮೆರಿಕ ಹಾಗೂ ಇಂಗ್ಲೆಂಡ್ ದೇಶಗಳು ಶೇ.100ರಷ್ಟು ಸಾಕ್ಷರತೆ ಸಾಧಿಸಿವೆ. ಸಾಕ್ಷರತೆಯಲ್ಲಿ ಸಾಧನೆ ಮಾಡಿರುವ ದೇಶಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು. 1988ರಲ್ಲಿ ದೇಶದಲ್ಲಿ ಸಾಕ್ಷರತಾ ಕಾರ್ಯಕ್ರಮ ಮೊದಲ ಬಾರಿಗೆ ಆರಂಭಗೊಂಡಿದ್ದು, ವಿವಿಧ ದೇಶಗಳ ಸಾಕ್ಷರತಾ ಪ್ರಮಾಣದ ಕುರಿತು ಮಾಹಿತಿ ನೀಡಿದರು.
‘ಸಾಕ್ಷರತೆ ಪ್ರತಿಯೊಬ್ಬರ ಹಕ್ಕು’
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹೇಶ್ ಮಾತನಾಡಿ, ಯೂನಿಸೆಫ್‌ನ 14ನೇ ಮಹಾಸಭೆಯಲ್ಲಿ ದೇಶದಲ್ಲಿ ಸಾಕ್ಷರತೆ ಸಾಧಿಸುವುದು ಅತ್ಯಂತ ಮುಖ್ಯವೆಂದು ಒತ್ತಿ ಹೇಳಲಾಗಿದೆ ಎಂದರು. ಸಾಕ್ಷರತೆ ಪ್ರತಿಯೊಬ್ಬರ ಹಕ್ಕು ಹಾಗೂ ಶಿಕ್ಷಣ ಪ್ರತಿಯೊಬ್ಬರ ಶಕ್ತಿ. ದೇಶ ಅಭಿವೃದ್ಧಿ ಸಾಧಿಸಬೇಕಾದರೆ ಸಾಕ್ಷರತೆಯ ಪ್ರಮಾಣ ಹೆಚ್ಚಿಸುವುದು ಅಗತ್ಯ ಎಂದು ಹೇಳಿದರು.
ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ ಮಾತನಾಡಿ, 2023-24ನೇ ಸಾಲಿನಲ್ಲಿ ಕೊಡಗಿನಲ್ಲಿ ಆರಂಭಿಸಲಾದ ಸಾಕ್ಷರತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಬಿಆರ್‌ಪಿ ಹಾಗೂ ಸಿಆರ್‌ಪಿಗಳು ವಹಿಸಿದ ಪಾತ್ರ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೂರು ತಾಲೂಕುಗಳ ನವಸಾಕ್ಷರರಿಗೆ ಸನ್ಮಾನಿಸಲಾಯಿತು. ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಂಜರಾಯಪಟ್ಟಣ ಕ್ಲಸ್ಟರ್‌ನ ನೆಲ್ಲಿಹುದಿಕೇರಿ ಪ್ರಧಾನ ಮುಖ್ಯ ಶಿಕ್ಷಕಿ ಆಶಾ ಅವರ ಕಾರ್ಯವನ್ನು ಪ್ರಶಂಸಿಸಲಾಯಿತು. ಸಾಕ್ಷರತಾ ಇಲಾಖೆಯಿಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸಿ. ಸೌಮ್ಯ, ಡಯಟ್‌ನ ಹಿರಿಯ ಉಪನ್ಯಾಸಕರಾದ ಕೃಷ್ಣಪ್ಪ, ಸ್ವಾಮಿ, ಪುಷ್ಪ, ವಿಜಯ್, ಪಿ.ಎಂ.ಶ್ರೀ ಶಾಲೆಯ ಮುಖ್ಯೋಪಾಧ್ಯಾಯ ಸಣ್ಣಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಚಂದನ್ ಕುಮಾರ್ ಸೇರಿದಂತೆ ಮೂರು ತಾಲೂಕುಗಳ ಬಿಆರ್‌ಪಿ ಹಾಗೂ ಸಿಆರ್‌ಪಿಗಳು ಉಪಸ್ಥಿತರಿದ್ದರು.
ಪ್ರೌಢಶಾಲಾ ವಿದ್ಯಾರ್ಥಿನಿ ಪವಿತ್ರ ಹಾಗೂ ತಂಡದವರು ಪ್ರಾರ್ಥಿಸಿದರು. ಡಯಟ್ ಉಪನ್ಯಾಸಕ ಹೇಮಂತ್ ರಾಜ್ ಸ್ವಾಗತಿಸಿದರು. ಸಿಆರ್‌ಪಿ ಶಾಂತಕುಮಾರ್ ನಿರೂಪಿಸಿದರು. ಬಿಆರ್‌ಪಿ ಪುಷ್ಪ ವಂದಿಸಿದರು







