ವಿರಾಜಪೇಟೆ, NEWS DESK ಸೆ.9 : ಕೃಷಿ ಚಟುವಟಿಕೆಯಲ್ಲಿ ರೈತರೊಂದಿಗೆ ದೊಡ್ಡ ದೊಡ್ಡ ಕಂಪನಿಗಳು ಕೈಜೋಡಿಸಿ, ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಒದಗಿಸಿದರೆ ಕೃಷಿಯನ್ನು ಮತ್ತಷ್ಟು ಲಾಭದಾಯಕವಾಗಿಸಬಹುದು ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ಸಜೇಶ್ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕಾರ್ಯಾನುಭವ ಶಿಬಿರ ಹಾಗೂ ಕೃಷಿ ಇಲಾಖೆ, ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬೇಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ರೈತರ ಬೆಳೆ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಹೆಚ್ಚು ಲಾಭದಾಯಕವಾಗಿ ಉಳಿದಿಲ್ಲ. ಉನ್ನತ ಶಿಕ್ಷಣ ಪಡೆದ ಯುವ ಸಮುದಾಯ ಉದ್ಯೋಗಕ್ಕಾಗಿ ವಿದೇಶ ಹಾಗೂ ನಗರ ಪ್ರದೇಶಗಳತ್ತ ತೆರಳುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಬಳಕೆಯನ್ನು ಹೆಚ್ಚಿಸಬೇಕಾಗಿದೆ ಎಂದರು.
ರೈತರಿಗೆ ಪೂರಕವಾಗುವ ಕೃಷಿ ಯಂತ್ರೋಪಕರಣಗಳನ್ನು ದೊಡ್ಡ ಕಂಪನಿಗಳು ಅಭಿವೃದ್ಧಿಪಡಿಸಿ ಕಡಿಮೆ ವೆಚ್ಚದಲ್ಲಿ ಒದಗಿಸಿದರೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೃಷಿಯ ಬಗ್ಗೆ ಯುವ ಸಮುದಾಯದ ಮನಸ್ಥಿತಿ ಬದಲಾಗಬೇಕು. ಸಮರ್ಪಕ ಮಾಹಿತಿ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಕೃಷಿಗೆ ತೊಡಗಿಸಿಕೊಂಡರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಪೂಜಾ ಸಜೇಶ್ ಹೇಳಿದರು.
ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ಪ್ರಾಧ್ಯಾಪಕ ಡಾ. ಜಡೇಗೌಡ ಎಂ. ಅವರು ಭತ್ತದ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಕುರಿತು ವಿಷಯ ಮಂಡಿಸಿದರು. ಕೆವಿಕೆ ಗೋಣಿಕೊಪ್ಪದ ವಿಷಯ ತಜ್ಞ ಡಾ. ಸಿ. ಪ್ರಭಾಕರ್ ತೋಟಗಾರಿಕಾ ಬೆಳೆಗಳ ಕುರಿತು ಮಾಹಿತಿ ನೀಡಿದರು. ಐಸಿಎಆರ್-ಕೆವಿಕೆ ಗೋಣಿಕೊಪ್ಪದ ವಿಷಯ ತಜ್ಞ ಡಾ. ವೀರೇಂದ್ರಕುಮಾರ್ ಕೆ.ವಿ. ಅವರು ಕಾಳುಮೆಣಸು ಹಾಗೂ ಕಾಫಿ ಬೆಳೆಯಲ್ಲಿನ ಕೀಟ ಮತ್ತು ರೋಗ ನಿರ್ವಹಣೆ ಕುರಿತು ವಿವರಿಸಿದರು.
ಅಪ್ಪಂಗಳದ ಭಾರತೀಯ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಜಿ.ಎ. ರಾಜಣ್ಣ ಅವರು ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಮಂಜುನಾಥ್ ಅವರು ಕಾರ್ಬನ್ ಕ್ರೆಡಿಟ್ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿಯ ಉಪ ಕೃಷಿ ನಿರ್ದೇಶಕ ಡಾ. ಡಿ.ಎಸ್. ಸೋಮಶೇಖರ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಕೃಷಿ ಚಟುವಟಿಕೆಯ ಅನುಭವ ಪಡೆಯುವುದು ಬಹಳ ಮುಖ್ಯ. ಕೃಷಿಯು ದೇಶದ ಪ್ರಾಥಮಿಕ ಆದಾಯದ ಮೂಲವಾಗಿದ್ದು, ಕೈಗಾರಿಕೆಗಳು ಎಷ್ಟೇ ಅಭಿವೃದ್ಧಿ ಹೊಂದಿದರೂ ಆಹಾರ ಬೆಳೆಗಳ ಉತ್ಪಾದನೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದರು.
ಕೃಷಿ ಭೂಮಿಯನ್ನು ಲೇಔಟ್ ಹಾಗೂ ಇತರ ಚಟುವಟಿಕೆಗಳಿಗೆ ಪರಿವರ್ತಿಸುವುದನ್ನು ಕಡಿಮೆ ಮಾಡಿ ಆಹಾರ ಬೆಳೆಗಳ ಉತ್ಪಾದನೆಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಆಹಾರ ಕೊರತೆಯನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್.ಎನ್. ಕೆಂಚಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಪ್ರಭಾರ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಪಿ.ಎಸ್. ಶಿವಕುಮಾರ್ ಮಾತನಾಡಿ, ರೋಗ-ರುಜಿನ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಕಾಲಕ್ರಮೇಣ ಕೃಷಿ ಚಟುವಟಿಕೆ ಕಡಿಮೆಯಾಗುತ್ತಿದೆ. ಕೃಷಿ ಇಲ್ಲದೆ ಮಾನವ ಬದುಕು ಸಾಧ್ಯವಿಲ್ಲ. ರೈತರು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಿಂದ ಕಾಲಕಾಲಕ್ಕೆ ಅಗತ್ಯ ಮಾಹಿತಿಯನ್ನು ಪಡೆದು ವೈಜ್ಞಾನಿಕವಾಗಿ ಕೃಷಿ ನಡೆಸಿದರೆ ಸ್ವಾವಲಂಬಿ ಜೀವನದೊಂದಿಗೆ ಉತ್ತಮ ಆದಾಯ ಗಳಿಸಬಹುದು ಎಂದರು.
ಈ ಸಂದರ್ಭದಲ್ಲಿ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಬಳಗಾನೂರಮಠ, ಕೆ.ಎಂ. ನಾಣಯ್ಯ, ಡಾ. ನವೀನ್, ಡಾ. ನಿಂಗರಾಜ್ ದಳವಾಯಿ ಹಾಗೂ ಡಾ. ಸುಮನ ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಹೆಗ್ಗಳ ಹಾಗೂ ಬೇಟೋಳಿ ಗ್ರಾಮದ ರೈತರು, ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.







