
ಮಡಿಕೇರಿ, ಸೆ.12 NEWS DESK : ಮಡಿಕೇರಿ ನಗರ ವ್ಯಾಪ್ತಿಯ ವಿವಿಧ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಕುರಿತು ತಪಾಸಣೆ ನಡೆಸಿ, ಕಾನೂನು ಅರಿವು ಮೂಡಿಸಲಾಯಿತು. ನಗರದ ಹೋಟೆಲ್, ದಿನಸಿ ಅಂಗಡಿ, ಕಾಫಿ–ಟೀ ಕ್ಯಾಂಟೀನ್ ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ ಕಾಯ್ದೆ, 2016ರ ಪ್ರಮುಖ ಅಂಶಗಳ ಕುರಿತು ಸಂಸ್ಥೆಗಳ ಮಾಲೀಕರಿಗೆ ಮಾಹಿತಿ ನೀಡಲಾಯಿತು. ಕಾಯ್ದೆಯ ಪ್ರಮುಖ ಅಂಶಗಳನ್ನು ಒಳಗೊಂಡ ಬಿತ್ತಿಪತ್ರಗಳನ್ನು ವಿತರಿಸಲಾಯಿತು. ಅಲ್ಲದೆ, ಸಂಸ್ಥೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳದಿರುವ ಕುರಿತು ಮಾಲೀಕರಿಂದ ಸ್ವಯಂ ಘೋಷಣಾ ಪತ್ರಗಳನ್ನು ಪಡೆಯುವ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸುವಂತೆ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ಕಾಯ್ದೆ, 1976, ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಹಾಗೂ ಪೋಕ್ಸೋ ಕಾಯ್ದೆ, 2012ರ ಕುರಿತು ಸಾರ್ವಜನಿಕರು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಕಾನೂನು ಅರಿವು ಮೂಡಿಸಲಾಯಿತು. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಬಳಸಿಕೊಳ್ಳಬೇಕಾದ 112–ತುರ್ತು ಸಹಾಯವಾಣಿ, 1098–ಮಕ್ಕಳ ಸಹಾಯವಾಣಿ, 181–ಮಹಿಳಾ ಸಹಾಯವಾಣಿ ಹಾಗೂ 1930–ಸೈಬರ್ ಅಪರಾಧ ಸಹಾಯವಾಣಿ ಕುರಿತು ಮಾಹಿತಿ ನೀಡಿ, ಅಗತ್ಯ ಸಂದರ್ಭಗಳಲ್ಲಿ ಸಹಾಯವಾಣಿಗಳ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಯಿತು. ತಪಾಸಣಾ ಕಾರ್ಯದಲ್ಲಿ ಮಡಿಕೇರಿ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ಕೊಡಗು ಉಪವಿಭಾಗದ ಪ್ರಭಾರ ಕಾರ್ಮಿಕ ಅಧಿಕಾರಿ ಎಂ.ಎಂ. ಯತ್ನಟ್ಟಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್. ಶಿರಾಜ್ ಅಹಮದ್, ರಕ್ಷಿತ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.









