ಮಡಿಕೇರಿ, NEWS DESK ಸೆ.12 : ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಅನುಷ್ಠಾನ ಸಮಿತಿಯೊಂದಿಗೆ ಚರ್ಚಿಸಿ, ವರದಿ ವ್ಯಾಪ್ತಿಯ 9,993.75 ಚ.ಕಿ.ಮೀ. ಪ್ರದೇಶವನ್ನು 8,590.69 ಚ.ಕಿ.ಮೀ.ಗೆ ಹಾಗೂ 123 ಗ್ರಾಮಗಳನ್ನು 98 ಗ್ರಾಮಗಳಿಗೆ ಸೀಮಿತಗೊಳಿಸಿ ವರದಿ ಜಾರಿಗೆ ಪ್ರಸ್ತಾಪಿಸಿದೆ. ಇದೇ ಮಾದರಿಯ ಪ್ರಯತ್ನವನ್ನು ಕರ್ನಾಟಕವೂ ಮಾಡಬೇಕೆಂದು ಸೇವ್ ಕೊಡಗು ಸಂಘಟನೆ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ಮಧು ಬೋಪಣ್ಣ ಅವರು, ಕಸ್ತೂರಿ ರಂಗನ್ ವರದಿ ಸಮಿತಿಯಲ್ಲಿ ವಿಜ್ಞಾನಿಗಳು ಹಾಗೂ ಪರಿಸರ ತಜ್ಞರಿಗೆ ಮಾತ್ರ ಪ್ರಾತಿನಿಧ್ಯವಿತ್ತು. ಪಶ್ಚಿಮಘಟ್ಟದ ಜನರ ಸಮಸ್ಯೆಗಳನ್ನು ಅರಿತ ಸಮಾಜಶಾಸ್ತ್ರಜ್ಞರು, ಜನಸಂಘಟನೆಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಸೂಕ್ತ ಪ್ರಾತಿನಿಧ್ಯ ಇರಲಿಲ್ಲ. ಪ್ರಸ್ತುತ ಸಂಜಯ್ ಕುಮಾರ್ ನೇತೃತ್ವದ ಅನುಷ್ಠಾನ ಸಮಿತಿಯಲ್ಲಿಯೂ ಪರಿಸರ ತಜ್ಞರೇ ಇದ್ದಾರೆ. ಹೀಗಾಗಿ ಸಮಿತಿಯನ್ನು ವಿಸರ್ಜಿಸಿ, ಸಮಾನ ಪ್ರಾತಿನಿಧ್ಯ ಹೊಂದಿರುವ ಹೊಸ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು ಎಂದು ಹೇಳಿದರು.
ಕಂದಾಯ ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬೇಕು. ಭೌತಿಕ ಸರ್ವೇ ನಡೆಸುವ ಮೂಲಕ ಪರಿಸರ ಸೂಕ್ಷ್ಮ ಪ್ರದೇಶವನ್ನು ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿ, ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿಯನ್ನು ಸಾರಾಸಗಟಾಗಿ ವಿರೋಧಿಸುವ ರಾಜ್ಯ ಸರ್ಕಾರದ ಕ್ರಮ ಸಮರ್ಪಕವಲ್ಲ ಹಾಗೂ ಅದು ಸಾಧ್ಯವೂ ಇಲ್ಲದ ವಿಚಾರವಾಗಿದೆ. ಸಮಸ್ಯೆ ಬಗೆಹರಿಸುವ ಪ್ರಯತ್ನಗಳ ಬದಲು ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಟೀಕಿಸಿದರು.
1980–90ರ ದಶಕಗಳಿಂದ ಕೊಡಗಿನ ಕೆಲವು ಪರಿಸರವಾದಿಗಳು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ನಕಲಿ ಸಂಘಟನೆಗಳ ಮೂಲಕ ವಿದೇಶಿ ದೇಣಿಗೆಗಳನ್ನು ದುರ್ಬಳಕೆ ಮಾಡಿಕೊಂಡು, ಜನರನ್ನು ಒಕ್ಕಲೆಬ್ಬಿಸಿ ಕೊಡಗನ್ನು ಅರಣ್ಯೀಕರಣ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಕಸ್ತೂರಿ ರಂಗನ್ ವರದಿ ಬಂದಿದೆ. ಜಮ್ಮಾ-ಬಾಣೆ ಜಾಗವನ್ನು ಅರಣ್ಯ ಪ್ರದೇಶವೆಂದು ಘೋಷಿಸುವ ಹಿಂದಿನ ಕ್ರಮ, ಕಾವೇರಿ ಜಲಾನಯನ ಕಣಿವೆ ಪ್ರದೇಶವನ್ನು ಗ್ರೇಟರ್ ತಲಕಾವೇರಿ ಯೋಜನೆಗೆ ಸೇರಿಸುವ ಒತ್ತಾಯ ಹಾಗೂ ಇಡೀ ಕೊಡಗನ್ನು ಸೂಕ್ಷ್ಮ ಪ್ರದೇಶವನ್ನಾಗಿ ಮಾಡುವ ಪ್ರಯತ್ನಗಳ ಹಿಂದೆ ಕೆಲವು ಡೋಂಗಿ ಪರಿಸರವಾದಿಗಳ ಕೈವಾಡವಿದೆ ಎಂದು ಮಧು ಬೋಪಣ್ಣ ಆರೋಪಿಸಿದರು.
ಕಸ್ತೂರಿ ರಂಗನ್ ವರದಿಯ ಜೊತೆಗೆ ಜಿಲ್ಲೆಯ ಸಿ ಮತ್ತು ಡಿ ದರ್ಜೆ ಜಾಗವನ್ನು ಅರಣ್ಯವಾಗಿ ಪರಿವರ್ತಿಸಿದರೆ ಕೊಡಗಿನ 10ರಿಂದ 15 ಸಾವಿರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೇವ್ ಕೊಡಗು ಸಂಘಟನೆಯ ಪ್ರಮುಖರಾದ ಬಿ.ಟಿ. ದಿನೇಶ್, ಜಿನ್ನು ನಾಣಯ್ಯ ಹಾಗೂ ಉದಯಶಂಕರ್ ಉಪಸ್ಥಿತರಿದ್ದರು.







