ಮಡಿಕೇರಿ, NEWS DESK ಸೆ.12: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಕಾನೂನು ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಅವರು ಗಣೇಶೋತ್ಸವ ಸಮಿತಿಗಳಿಗೆ ಮನವಿ ಮಾಡಿದ್ದಾರೆ.
ಮಡಿಕೇರಿಯ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಠಾಣಾ ಹಾಗೂ ವಲಯ ಮಟ್ಟದಲ್ಲಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಗಣೇಶೋತ್ಸವ ಆಯೋಜನಾ ಸಮಿತಿಗಳ ಪ್ರಮುಖರ ಸಭೆ ನಡೆಸಿ, ಶಾಂತಿಯುತ ಹಾಗೂ ಕ್ರಮಬದ್ಧವಾಗಿ ಉತ್ಸವ ಆಚರಿಸಲು ಅಗತ್ಯ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಗಣೇಶೋತ್ಸವ ಸಂದರ್ಭದಲ್ಲಿ ಧ್ವನಿವರ್ಧಕಗಳಲ್ಲಿ ‘ಪ್ರೆಷರ್ ಮಿಡ್’ ಅಳವಡಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೆ.14ರಿಂದ ಅ.31ರವರೆಗೆ ಕೊಡಗು ಜಿಲ್ಲೆಯಾದ್ಯಂತ ಈ ನಿಷೇಧ ಜಾರಿಯಲ್ಲಿರಲಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಡಿಜೆ ಸೇರಿದಂತೆ ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡುವ ಯಾವುದೇ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಸತಿ ಪ್ರದೇಶಗಳಲ್ಲಿ ಹಗಲು 55 ಹಾಗೂ ರಾತ್ರಿ 45 ಡೆಸಿಬಲ್, ವಾಣಿಜ್ಯ ಪ್ರದೇಶಗಳಲ್ಲಿ ಹಗಲು 65 ಹಾಗೂ ರಾತ್ರಿ 55 ಡೆಸಿಬಲ್, ಕೈಗಾರಿಕಾ ಪ್ರದೇಶಗಳಲ್ಲಿ ಹಗಲು 75 ಹಾಗೂ ರಾತ್ರಿ 70 ಡೆಸಿಬಲ್ ಮತ್ತು ಆಸ್ಪತ್ರೆ, ಶಾಲೆಗಳ ಸುತ್ತಮುತ್ತಲಿನ ಶಾಂತ ಪ್ರದೇಶಗಳಲ್ಲಿ ಹಗಲು 50 ಹಾಗೂ ರಾತ್ರಿ 40 ಡೆಸಿಬಲ್ ಶಬ್ದದ ಮಿತಿ ನಿಗದಿಪಡಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಜಿಲ್ಲೆಯ ವಿವಿಧೆಡೆ ಉತ್ಸವ ಆಯೋಜನಾ ಸಮಿತಿಗಳ ಪದಾಧಿಕಾರಿಗಳಿಗೆ ಶಬ್ದ ಮಿತಿಯ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದರೆ ಶಬ್ದ ಮಾಲಿನ್ಯ ನಿಯಂತ್ರಣ ಕಾನೂನು ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 15ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಒಂದು ಲಕ್ಷ ರೂ.ವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಎಸ್ಪಿ ಎಚ್ಚರಿಸಿದರು.
ಉತ್ಸವ ಸಮಿತಿಗಳಿಗೆ ಅಗತ್ಯ ಅನುಮತಿಗಳನ್ನು ನೀಡಲು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ‘ಏಕ ಗವಾಕ್ಷಿ’ ವ್ಯವಸ್ಥೆ ಕಲ್ಪಿಸಲಾಗಿದೆ. ಸೆ.13ರವರೆಗೆ ಈ ವ್ಯವಸ್ಥೆಯಡಿ ಅನುಮತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಗೌರಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ 630ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಮೂರುರಿಂದ ಒಂಬತ್ತು ದಿನಗಳ ಕಾಲ ಉತ್ಸವ ಆಚರಿಸುವ ಸಮಿತಿಗಳು ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಗ್ನಿ ಅವಘಡ ತಡೆಗೆ ಮುನ್ನೆಚ್ಚರಿಕೆ ವಹಿಸುವುದು, ರಾತ್ರಿ ವೇಳೆ ಸಮಿತಿಗಳಿಂದಲೇ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಮೆರವಣಿಗೆಯ ದಿನಾಂಕ, ಸಮಯ ಮತ್ತು ರೂಟ್ ಮ್ಯಾಪ್ ಅನ್ನು ಪೊಲೀಸರಿಗೆ ನೀಡುವಂತೆ ಸೂಚಿಸಲಾಗಿದೆ ಎಂದು ಎಸ್ಪಿ ಬಿಂದುಮಣಿ ಮಾಹಿತಿ ನೀಡಿದರು.







