ಸಿದ್ದಾಪುರ, NEWS DESK ಸೆ.19: ನೆಲ್ಯಹುದಿಕೇರಿ ವ್ಯಾಪ್ತಿಯ ಅತ್ತಿಮಂಗಲ ಬಳಿ ಹಾಡಹಗಲೇ ಒಂಟಿ ಸಲಗವೊಂದು ಕಾರ್ಮಿಕರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಅಭ್ಯತ್ಮಂಗಲ ನಿವಾಸಿಗಳಾದ ಸುಬ್ರಮಣಿ (57) ಮತ್ತು ಉಮೇಶ್ ಅವರು ಸ್ಕೂಟಿಯಲ್ಲಿ ಸಿದ್ದಾಪುರದ ಕಡೆಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಎದುರಾದ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಆನೆಯ ದಾಳಿಯಿಂದ ಸ್ಕೂಟಿ ಸಮೇತ ಕೆಳಗೆ ಬಿದ್ದ ಸುಬ್ರಮಣಿ ಅವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳು ಸುಬ್ರಮಣಿ ಅವರಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಮಿಕ ಮುಖಂಡ ಭರತ್, ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳು ಬೆಳೆದಿರುವುದರಿಂದ ವಾಹನ ಸವಾರರಿಗೆ ಕಾಡುಪ್ರಾಣಿಗಳು ನಿಂತಿರುವುದು ಕಾಣುವುದಿಲ್ಲ. ಇದರಿಂದ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.
“ಕೂಡಲೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ರಸ್ತೆಯ ಇಕ್ಕೆಲಗಳ ಪೊದೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅರಣ್ಯ ಇಲಾಖೆ ವನ್ಯಜೀವಿ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಮುಂದುವರಿದರೆ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು,” ಎಂದು ಅವರು ಎಚ್ಚರಿಸಿದ್ದಾರೆ.







