ಸುಂಟಿಕೊಪ್ಪ, NEWS DESK ಸೆ.19: ವಿಶ್ವ ಹಿಂದೂ ಪರಿಷತ್ ಹಾಗೂ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ರಾಮಮಂದಿರದಲ್ಲಿ ನಡೆಯುತ್ತಿರುವ 62ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಅಮ್ಮತ್ತಿಯ ರಾಜ್ಯ ಪ್ರಶಸ್ತಿ ವಿಜೇತ ರಾಜೇಶ್ ಮತ್ತು ತಂಡದಿಂದ ನಡೆದ ಜಾದು ಪ್ರದರ್ಶನವು ನೆರೆದಿದ್ದ ಜನರ ಮನಸೂರೆಗೊಂಡಿತು.
ರಾತ್ರಿ 8 ಗಂಟೆಗೆ ಆರಂಭವಾದ ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷ ವಿಘ್ನೇಶ್ ಉದ್ಘಾಟಿಸಿದರು.
ನಂತರ ನಡೆದ ಜಾದು ಪ್ರದರ್ಶನವು ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸಿತು. ಕೈಯನ್ನು ಕತ್ತರಿಸಿ ಮತ್ತೆ ಜೋಡಿಸುವ ಪ್ರಯೋಗವನ್ನು ಕಂಡು ಜನರು ನಿಶ್ಯಬ್ದರಾದರು. ಗಾಳಿಯಲ್ಲಿ ಹಾರಾಡುವ ಕುರ್ಚಿ, ಚೆಂಡು ಹಾಗೂ ಪುಸ್ತಕದೊಳಗಿಂದ ಗಿಟಾರ್ ಹೊರತೆಗೆದ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಭಾರಿ ಚಪ್ಪಾಳೆ ವ್ಯಕ್ತವಾಯಿತು.
ಖಾಲಿ ಬ್ಯಾಗಿನಿಂದ ಹೂವು, ಗಿಫ್ಟ್ ಬಾಕ್ಸ್, ಚಾಕಲೇಟ್ ಹಾಗೂ ಸಾವರ್ಕರ್ ಅವರ ಭಾವಚಿತ್ರವನ್ನು ಹೊರತೆಗೆದರು. ಅಲ್ಲದೆ ಹಾರಾಡಿದ ಬಣ್ಣಬಣ್ಣದ ಬಲ್ಬ್‌ಗಳು ಸೇರಿದಂತೆ ಹತ್ತು ಹಲವು ಜಾದೂ ಪ್ರದರ್ಶನಗಳನ್ನು ನೀಡಿ ಜನರನ್ನು ರಂಜಿಸಿದರು.
ಕೊನೆಯಲ್ಲಿ ಮಾಯಾಜಾಲದ ಮೂಲಕ ಪ್ರೇಕ್ಷಕರಿಂದಲೇ ಭಾರತದ ರಾಷ್ಟ್ರಧ್ವಜವನ್ನು ಹೊರತರುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಈ ವೇಳೆ ನೆರೆದಿದ್ದವರು ಎದ್ದು ನಿಂತು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ನಂತರ ಮಹಾಪೂಜೆ, ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.







