
ಮಡಿಕೇರಿ ಸೆ.19 NEWS DESK : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2025-26ನೇ ಸಾಲಿನಲ್ಲಿ 22.39 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯ ಸಹಕಾರ ಸಂಘಗಳಿಗೆ ಶೇ.20ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22ರಂದು ಮಡಿಕೇರಿಯ ಬ್ಯಾಂಕಿನ ಕೇಂದ್ರ ಕಚೇರಿ ಉನ್ನತಿ ಭವನದ ದಿ. ಪಂದ್ಯಂಡ ಐ. ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಬ್ಯಾಂಕಿನ 101ನೇ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ತಿಳಿಸಿದರು. ಬ್ಯಾಂಕಿನಲ್ಲಿ 2026ರ ಮಾರ್ಚ್ 31ಕ್ಕೆ 2,043.11 ಕೋಟಿ ಠೇವಣಿ ಸಂಗ್ರಹವಾಗಿದ್ದು, 2026-27ನೇ ಸಾಲಿನಲ್ಲಿ 2,320 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಬ್ಯಾಂಕಿನ ಒಟ್ಟು ವ್ಯವಹಾರವು ₹3,815.25 ಕೋಟಿಯಾಗಿದೆಯೆಂದು ಮಾಹಿತಿಯನ್ನಿತ್ತರು. ರೈತರಿಗೆ 812.68 ಕೋಟಿ ಕೆಸಿಸಿ ಸಾಲ-ಜಿಲ್ಲೆಯ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, 2025-26ನೇ ಸಾಲಿನಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಬ್ಯಾಂಕಿನ ಶಾಖೆಗಳ ಮೂಲಕ ಅರ್ಹ ರೈತರಿಗೆ 812.68 ಕೋಟಿ ಕೆಸಿಸಿ ಸಾಲ ವಿತರಿಸಲಾಗಿದೆ.2025-26ನೇ ಸಾಲಿನಲ್ಲಿ 3 ಲಕ್ಷದಿಂದ ₹5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ 9,719 ರೈತರಿಗೆ 443.92 ಕೋಟಿ ಸಾಲವನ್ನು ಬ್ಯಾಂಕಿನ ಸ್ವಂತ ಬಂಡವಾಳದಿಂದ ವಿತರಿಸಲಾಗಿದೆಯೆಂದರು. :: ಹೊಸ ಸಾಲ ಯೋಜನೆ :: ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಮನೆ ನವೀಕರಣಕ್ಕಾಗಿ ಅರ್ಹತೆ ಆಧಾರದಲ್ಲಿ ಗರಿಷ್ಠ 20 ಲಕ್ಷದವರೆಗೆ ಸಾಲ ನೀಡುವ ಹೊಸ ಯೋಜನೆ ಜಾರಿಗೆ ತರಲಾಗಿದೆ. ವಾಹನ ಸಾಲವನ್ನು ಯಾವುದೇ ಸ್ಥಿರಾಸ್ತಿ ಅಡಮಾನವಿಲ್ಲದೆ ಹೈಪಾಥಿಕೇಶನ್ ಆಧಾರದಲ್ಲಿ ಗರಿಷ್ಠ 60 ಲಕ್ಷದವರೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆಯೆಂದರು. :: ನಾಲ್ಕು ಹೊಸ ಶಾಖೆಗಳಿಗೆ ಪ್ರಸ್ತಾವನೆ :: ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೇವೆ ವಿಸ್ತರಿಸುವ ಉದ್ದೇಶದಿಂದ ಚೆಟ್ಟಳ್ಳಿ, ಕೂಡಮಂಗಳೂರು, ಕಾನೂರು ಹಾಗೂ ಅಲೂರು ಸಿದ್ದಾಪುರದಲ್ಲಿ ಹೊಸ ಶಾಖೆಗಳನ್ನು ತೆರೆಯಲು ಆರ್‍ಬಿಐಗೆ 2025ರ ಡಿಸೆಂಬರ್ 21ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಹೊಟ್ಟೆಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್‍ಕುಮಾರ್, ಹೆಚ್.ಕೆ. ಮಾದಪ್ಪ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ಬೆಳ್ಯಪ್ಪ ಉಪಸ್ಥಿತರಿದ್ದರು.










