
ಮಡಿಕೇರಿ ಸೆ.19 NEWS DESK : ಪ್ರಾಕೃತಿಕ ವಿಕೋಪ ಮತ್ತು ಮುಂಗಾರಿನ ಅವಧಿಗೆ ಸಂಬಂಧಿಸಿದಂತೆ 2019-20ನೇ ಸಾಲಿನಿಂದ ಇಲ್ಲಿಯವರೆಗೆ ಎನ್‍ಡಿಆರ್‍ಎಫ್‍ನ ಮಳೆಹಾನಿ ದುರಸ್ತಿ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದಿರುವುದು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಟೆಂಡರ್‍ಗಳಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ಮತ್ತು ಕಿರುಕುಳವನ್ನು ಖಂಡಿಸಿ ಸೆ.22 ರಿಂದ ನಗರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಛೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ರಾಜೀವ ಲೋಚನ ಬಿ.ಪಿ. ಅವರು ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪ, ಮಳೆಹಾನಿಗೆ ಸಂಬಂಧಿಸಿದಂತೆ ಸ್ಥಳೀಯ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳಿಗೆ ಸಂಬಂಧಿಸಿಂತೆ ಸುಮಾರು 7.50ಕೊಟಿ ಬಿಲ್ ಪಾವತಿಗೆ ಬಾಕಿ ಇದೆ.ಕಳೆದ ಐದಾರು ವರ್ಷಗಳಿಂದ ಸಂಘ ಬಿಲ್ ಪಾವತಿಗೆ ಒತ್ತಾಯಿಸುತ್ತ ಬಂದಿದ್ದರು ಸೂಕ್ತ ಸ್ಪಂದನ ದೊರಕಿಲ್ಲವೆಂದು ತೀವ್ರ ಬೇಸರ ವ್ಯಕ್ತಪಡಿಸಿದರು. :: ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಮಣೆ!? :: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 1 ಕೋಟಿ ರೂ. ಒಳಗಿನ ಜಿಲ್ಲಾ ಪಂಚಾಯ್ತಿಯ ವಿವಿಧ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ವಹಿಸಿಕೊಡಲಾಗುತ್ತಿದೆ. ಇದಕ್ಕೆ ಇಲಾಖಾ ಅಧಿಕಾರಿಗಳು ಸಹಕಾರ ನೀಡುತ್ತಿರುವುದಲ್ಲದೆ, ಕಾಮಗಾರಿಯ ಗುಣಮಟ್ಟ ಸಮರ್ಪಕವಾಗಿಲ್ಲದೆ ಇದ್ದರು ಬಿಲ್ ಪಾವತಿಸಲಾಗುತ್ತಿದೆಯೆಂದು ಆರೋಪಿಸಿದ ರಾಜೀವ ಲೋಚನ, ಹೊರ ಜಿಲ್ಲೆಯ ಗುತ್ತಿಗೆದಾರರು ನಿರ್ದಿಷ್ಟ ಕಾಮಗಾರಿಗೆ ತಗಲುವ ಅಂದಾಜು ವೆಚ್ಚಕ್ಕಿಂತ ಶೇ.15 ರಿಂದ 30 ರಷ್ಟು ಕಡಿಮೆ ಹಣವನ್ನು ನಮೂದಿಸುವ ಮೂಲಕ ಸ್ಥಳೀಯರಿಗೆ ಗುತ್ತಿಗೆ ದೊರಕದಂತೆ ಮಾಡುತ್ತಿದ್ದಾರೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. :: ಅಧಿಕಾರಿಗಳ ಬೇಜವಾಬ್ದಾರಿತನ :: ಜಿಲ್ಲಾ ಪಂಚಾಯ್ತಿಯ ಎಸ್‍ಡಿಎಂಎಫ್ ಯೋಜನೆಯಡಿ ಮಂಜೂರಾದ 50 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿಗಳ ಪ್ರಸ್ತಾವನೆಗಳನ್ನು ಪಿಆರ್‍ಇಡಿ ಅಧೀಕ್ಷಕ ಇಂಜಿನಿಯರ್ ಕಚೇರಿ, ಮೈಸೂರಿಗೆ ಕಳುಹಿಸುವಲ್ಲಿ ಸುಮಾರು 90 ದಿನಗಳವರೆಗೆ ವಿಳಂಬ ಮಡಲಾಗುತ್ತಿದೆ. ಇದರಿಂದ ಕಾಮಗಾರಿಗಳ ಪ್ರಗತಿ ಕುಂಠಿತವಾಗುವುದರ ಜೊತೆಗೆ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ರಾಜೀವ ಲೋಚನ ತಿಳಿಸಿದರು. ತುಂಡು ಗುತ್ತಿಗೆಯಲ್ಲೂ ಸ್ಥಳೀಯರಿಗೆ ಸಂಚಕಾರ ಕಚೇರಿಗಳಲ್ಲಿ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಕಾಮಗಾರಿಗಳನ್ನು ಕೆಆರ್‍ಐಡಿಎಲ್ ಹಾಗೂ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗುತ್ತಿದೆ. 5 ಲಕ್ಷದೊಳಗಿನ ತುಂಡು ಗುತ್ತಿಗೆ ಕಾಮಗಾರಿಗಳಲ್ಲಿಯೂ ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದರಲ್ಲದೆ, ಜಿಪಂ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ಹಾಗೂ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿದ ಅವರು, ಈ ಬಗ್ಗೆ ತನಿಖೆಗೆ ಆಗ್ರಹಿಸಿದರು. :: ರಾಜಕಾರಣಿಗಳ ಪ್ರಭಾವ :: ಲೋಕೋಪಯೋಗಿ ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ರವಿ ಚಂಗಪ್ಪ ಅವರು ಮಾತನಾಡಿ, ಸ್ಥಳೀಯ ಗುತ್ತಿಗೆದಾರರ ಕಡೆಗಣನೆ, ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಟೆಂಡರ್ ನೀಡುವ ಕಾರ್ಯಗಳಲ್ಲಿ ರಾಜಕಾರಣಿಗಳ ಪ್ರಭಾವವಿದ್ದು, ಇದನ್ನು ಶೀಘ್ರ ಬಹಿರಂಗಪಡಿಸುವುದಾಗಿ ತೀಕ್ಷ್ಣವಾಗಿ ನುಡಿದರಲ್ಲದೆ, ತಾಲ್ಲೂಕು ಸಂಘದ ಹೋರಾಟಕ್ಕೆ ಜಿಲ್ಲಾ ಸಂಘ ಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ತಾಲ್ಲೂಕು ಸಂಘದ ಉಪಾಧ್ಯಕ್ಷರಾದ ಬಿ.ಆರ್. ಸದಾಶಿವ ರೈ, ಕಾರ್ಯದರ್ಶಿ ಕೆ.ವಿ.ಕವನ್, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಜಗದೀಶ್ ರೈ, ತಾಲ್ಲೂಕು ಸಂಘದ ನಿರ್ದೇಶಕ ವಿ.ಜಿ. ಮೋಹನ್ ಉಪಸ್ಥಿತರಿದ್ದರು.








