
ಮಡಿಕೇರಿ ಸೆ.19 NEWS DESK : ಪಶ್ಚಿಮ ಘಟ್ಟ ಸಾಲಿನ ಕೊಡಗಿನ ಹಸಿರ ಪರಿಸರದ ಸಂರಕ್ಷಣೆಯಾದಲ್ಲಿ ಜೀವನದಿ “ಕಾವೇರಿ” ಉಳಿಯುತ್ತಾಳೆ, ಕಾವೇರಿ ನದಿ ಉಳಿದರೆ ರಾಜ್ಯ ಹೊರ ರಾಜ್ಯಗಳ 8 ಕೋಟಿ ಮಂದಿ ಅದರ ಪ್ರಯೋಜನವನ್ನು ಪಡೆಯುವ ಮೂಲಕ ನಾಡು ಸುಭಿಕ್ಷವಾಗುತ್ತದೆಂದು ಎನ್ವಿರಾನ್ಮೆಂಟ್ ಅಂಡ್ ಹೆಲ್ತ್ ಫೌಂಡೇಷನ್ ಇಂಡಿಯಾದ ಅಧ್ಯಕ್ಷರಾದ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಅಭಿಪ್ರಾಯಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಪರಿಸರ, ವನ್ಯ ಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು “ಡೋಂಗಿ ಪರಿಸರ”ವಾದಿಗಳೆಂದು ಟೀಕಿಸುವುದು, ಅವರು ವಿದೇಶಿ ಹಣವನ್ನು ಪಡೆಯುತ್ತಿರುವುದಾಗಿ ಆರೋಪಿಸುವ ಕ್ರಮ ಸರಿಯಲ್ಲ. ಪರಿಸರದ ಹೆಸರಿನಲ್ಲಿ ವಿದೇಶ ಹಣ ಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿರುವವರು ಇದ್ದಲ್ಲಿ ಅದು ಸ್ಪಷ್ಟವಾಗಿ ದೇಶ ದ್ರೋಹದ ಕಾರ್ಯವಾಗುತ್ತದೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. :: ತಪ್ಪು ಮಾಡಿದ್ದರೆ ತಿಳಿಸಿ-ಸರಿಪಡಿಸಿಕೊಳ್ಳೋಣ- :: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಅವರು, ಡೋಂಗಿ ಪರಿಸರವಾದಿಗಳಿಂದ ತೊಂದರೆಯಾಗುತ್ತಿದೆ. ಅವರು ವಿದೇಶಿ ಹಣಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದಾರೆ. ಇಂತಹ ಆರೋಪಗಳನ್ನು ಮಾಡುವ ಸಂದರ್ಭ ತಪ್ಪು ಮಾಡಿದವರ ಹೆಸರನ್ನು ಹೇಳಿ ಆರೋಪ ಮಾಡುವುದು ಒಳಿತು.ಹೆಸರು ಹೇಳದೆ ಆರೋಪವನ್ನು ಸಾರ್ವತ್ರಿಕಗೊಳಿಸುವುದು ಸರಿಯಲ್ಲವೆಂದು ಅಭಿಪ್ರಾಯಿಸಿದರು. ಪ್ರತಿಯೊಬ್ಬರಿಂದಲೂ ತಪ್ಪುಗಳಾಗುವ ಸಾಧ್ಯತೆ ಇದೆ. ಹಿಂದಿನ ನಿರ್ಧಾರಗಳನ್ನು ಕೂಡ ಮುಕ್ತವಾಗಿ ಚರ್ಚಿಸಿ, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಸಿದ್ಧರಿರಬೇಕು. ಕೊಡಗು ಜಿಲ್ಲೆಯಲ್ಲಿ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಅನುಮತಿ ನೀಡಿದ ಪರಿಣಾಮ ಅಪಾರ ಪ್ರಮಾಣದ ಮರಗಳ ನಾಶವಾಗಿದೆ ಎಂಬುದು ಪರಿಸರದ ದೃಷ್ಟಿಯಿಂದ ಗಂಭೀರ ವಿಚಾರ ಎಂದು ಕರ್ನಲ್ ಸಿ.ಪಿ. ಮುತ್ತಣ್ಣ ಹೇಳಿದರು. ಕೊಡಗು ಜಿಲ್ಲೆಯ ಪರಿಸರ ಸಂರಕ್ಷಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. :: ಕಸ್ತೂರಿ ರಂಗನ್ ವರದಿ ಅವಶ್ಯ :: ಸಂಘಟನೆಯ ಸದಸ್ಯರಾದ ಗೋಪಿನಾಥ್ ಅವರು ಮಾತನಾಡಿ, ಕೊಡಗಿನ ಶ್ರೀಮಂತ ಪರಿಸರ, ವನ್ಯಜೀವಿಗಳ ಉಳಿವು ಮತ್ತು ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿ ಅತ್ಯವಶ್ಯವಾಗಿದೆ ಎಂದರು. ಸಂಘಟನೆಯ ಸದಸ್ಯರಾದ ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ, ಕಾವೇರಿ ಒಡಲು ತುಂಬಿ ಮಾನವ ಕುಲಕ್ಕೆ ವರವಾಗಿ ಹರಿಯಬೇಕಾದರೆ ಇಲ್ಲಿನ ಪರಿಸರದ ಸಂರಕ್ಷಣೆ ಅತ್ಯವಶ್ಯವಾಗಿ ನಡೆಯಬೇಕು, ಇದಕ್ಕಾಗಿ ಕಸ್ತೂರಿ ರಂಗನ್ ವರದಿಯ ಅಗತ್ಯವಿದೆಯೆಂದು ಸ್ಪಷ್ಟಪಡಿಸಿದರು. ಪಶ್ಚಿಮ ಘಟ್ಟ ಸಾಲಿನ ಪರಿಸರ ಸಂರಕ್ಷಣೆಯ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವ ಯಾವೊಬ್ಬ ವ್ಯಕ್ತಿಯೂ ಅದರಲ್ಲಿನ ಅವೈಜ್ಞಾನಿಕ ಅಂಶಗಳಾದರು ಏನು, ಪರಿಸರಕ್ಕೆ ವಿರುದ್ಧವಾದ ವಿಚಾರ ಏನಿದೆ ಎಂಬುದನ್ನು ತಿಳಿಸಿಲ್ಲ. ಕಳೆದ ಐದು ವರ್ಷಗಳ ಹಿಂದಿನ ಪರಿಸರ ಕೊಡಗಿನಲ್ಲಿ ಇಂದು ಇಲ್ಲವಾಗಿದೆ. ಇದರ ಪರಿಣಾಮ ಪ್ರಾಕೃತಿಕ ವಿಕೋಪಗಳು ಉಂಟಾಗುತ್ತಿದ್ದು, ಮುಂದಿನ ನವೆಂಬರ್ , ಜನವರಿ ತಿಂಗಳಿನಲ್ಲಿ ಕಾವೇರಿಯಲ್ಲಿ ನೀರು ಬರಿದಾಗಿ ಮರಳುಗಾಡಾಗುವ ಆತಂಕವಿದೆ. ಈ ಹಿನ್ನೆಲೆ ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ನಾವು ತೊಡಗಿಸಿಕೊಂಡಿದ್ದು, ನಮ್ಮನ್ನು ಒಳಗೊಂಡಂತೆ ಸಾರಾಸಗಟಾಗಿ ಡೋಂಗಿ ಪರಿಸರವಾದಿಗಳೆಂದು ಟೀಕಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಫ್ರಾಂಕ್ಲಿನ್ ಉಪಸ್ಥಿತರಿದ್ದರು.










