ಮಡಿಕೇರಿ, NEWS DESK ಸೆ. 25: ಕೊಡಗಿನ ಭೂಮಿ, ಸಂಸ್ಕೃತಿ ಹಾಗೂ ಸಮುದಾಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಸಂಕಲ್ಪದೊಂದಿಗೆ ‘ಕೊಡಗು ಶಕ್ತಿ ನಡಪು’ ಅ. 3ರಂದು ನಡೆಯಲಿದೆ ಎಂದು ಯಾತ್ರೆಯ ಆಯೋಜಕ ಬಲ್ಯಾಟಂಡ ಪೂಣಚ್ಚ ಮಾಚಯ್ಯ ತಿಳಿಸಿದ್ದಾರೆ.
ಕಾವೇರಿ ಮಾತೆಯ ಉಗಮಸ್ಥಳ ತಲಕಾವೇರಿಯಿಂದ ಬೆಳಿಗ್ಗೆ 6.30ಕ್ಕೆ ಆರಂಭವಾಗುವ ಯಾತ್ರೆ ಪೇರೂರು ಇಗ್ಗುತ್ತಪ್ಪ ಹಾಗೂ ನೆಲಜಿ ಇಗ್ಗುತ್ತಪ್ಪ ದೇವಾಲಯಗಳ ಮೂಲಕ ಸಾಗಿಬಂದು, ಮಳೆ, ಬೆಳೆ ಹಾಗೂ ಸುಗ್ಗಿಯೊಂದಿಗೆ ಆಳವಾದ ಸಂಬಂಧ ಹೊಂದಿರುವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಂಜೆ 6.30ಕ್ಕೆ ಅಂತ್ಯಗೊಳ್ಳಲಿದೆ.
ಅಖಿಲ ಕೊಡವ ಸಮಾಜ, ಇಗ್ಗುತ್ತಪ್ಪ ದೇವಾಲಯ ಸಮಿತಿಗಳು, ಮಲ್ಮ ಬೆಟ್ಟ ಹೋರಾಟ ಸಮಿತಿಗಳು ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದಲ್ಲಿ ಯಾತ್ರೆ ನಡೆಯಲಿದೆ. ಮಾರ್ಗದ ಆಯ್ದ ಭಾಗಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲಾಗಿದ್ದು, ಕೆಲವು ಸಂಪರ್ಕ ಮಾರ್ಗಗಳಲ್ಲಿ ವಾಹನದ ನೆರವು ಪಡೆಯಲಾಗುತ್ತದೆ. ಒಟ್ಟು ಸುಮಾರು 40 ಕಿ.ಮೀ. ದೂರವನ್ನು ಒಂದೇ ದಿನದಲ್ಲಿ ಕ್ರಮಿಸುವ ಉದ್ದೇಶ ಹೊಂದಲಾಗಿದೆ.
ಸಂರಕ್ಷಣೆಗೆ ಸಂಕಲ್ಪ
ಪಶ್ಚಿಮಘಟ್ಟಗಳ ಪ್ರಮುಖ ಭಾಗವಾಗಿರುವ ಕೊಡಗು ಜೀವವೈವಿಧ್ಯ ಹಾಗೂ ದಕ್ಷಿಣ ಭಾರತದ ಜಲಸಂಪನ್ಮೂಲಗಳ ದೃಷ್ಟಿಯಿಂದ ಮಹತ್ವದ ಪ್ರದೇಶವಾಗಿದೆ. ಕಾವೇರಿ ನದಿಯ ಉಗಮವೂ ಕೊಡಗಿನಲ್ಲೇ ಆಗಿದೆ. ಮಳೆಯ ಏರುಪೇರು ಸೇರಿದಂತೆ ಪರಿಸರದಲ್ಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಕೊಡಗಿನ ಕಾಡುಗಳು, ಸಸ್ಯ-ಪ್ರಾಣಿ ಸಂಕುಲ, ಮಣ್ಣು, ಜೌಗು ಪ್ರದೇಶಗಳು, ಹೊಳೆಗಳು ಹಾಗೂ ಜಲಾನಯನ ಪ್ರದೇಶಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಂಸ್ಕೃತಿಯ ಸಂರಕ್ಷಣೆ
ಕೊಡಗಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಜನರು ಮತ್ತು ಪ್ರಕೃತಿಯ ನಡುವಿನ ಪವಿತ್ರ ಸಂಬಂಧಕ್ಕೆ ವಿಶೇಷ ಸ್ಥಾನವಿದೆ. ಕಾವೇರಿ, ಇಗ್ಗುತ್ತಪ್ಪ, ಪವಿತ್ರ ಜಲಮೂಲಗಳು, ಮಂದ್ಗಳು, ಪೂರ್ವಜರ ಭೂಮಿ ಹಾಗೂ ಸುಗ್ಗಿ ಸಂಪ್ರದಾಯಗಳ ಮೇಲಿನ ಗೌರವವು ಪ್ರಕೃತಿ ಸಂರಕ್ಷಣೆ ಕೊಡಗಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವುದನ್ನು ಪ್ರತಿಬಿಂಬಿಸುತ್ತದೆ.
ಕೊಡವ ತಕ್ ಭಾಷೆಯ ಸಂರಕ್ಷಣೆಯ ಅಗತ್ಯವನ್ನೂ ‘ನಡಪು’ ಒತ್ತಿಹೇಳುತ್ತದೆ. ಯುವ ಪೀಳಿಗೆಯಲ್ಲಿ ಕೊಡವ ತಕ್ ಮಾತನಾಡುವುದು, ಕಲಿಸುವುದು, ದಾಖಲಿಸುವುದು ಹಾಗೂ ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಎಲ್ಲರಿಗೂ ಮುಕ್ತವಾದ ಸಾಮೂಹಿಕ ಯಾತ್ರೆ
ಕೊಡಗು ಹಾಗೂ ಕಾವೇರಿ ನದಿಯ ಬಗ್ಗೆ ಕಾಳಜಿ ಹೊಂದಿರುವ ಎಲ್ಲರಿಗೂ ‘ಕೊಡಗು ಶಕ್ತಿ ನಡಪು’ ಮುಕ್ತವಾಗಿದೆ. ಭಾಗವಹಿಸುವವರು ಗೊತ್ತುಪಡಿಸಿದ ಸ್ಥಳಗಳಲ್ಲಿ ಯಾತ್ರೆಗೆ ಸೇರಿಕೊಳ್ಳಬಹುದಾಗಿದ್ದು, ಮಾರ್ಗದ ಆಯ್ದ ಭಾಗಗಳಲ್ಲಿ ಕಾಲ್ನಡಿಗೆಯಲ್ಲೂ ಪಾಲ್ಗೊಳ್ಳಬಹುದು.
ಪ್ರಕೃತಿ, ಸಂಸ್ಕೃತಿ ಮತ್ತು ಭವಿಷ್ಯ ಎಂಬ ಸಂದೇಶದೊಂದಿಗೆ ಯಾತ್ರೆ ನಡೆಯಲಿದೆ ಎಂದು ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅಧ್ಯಕ್ಷ ಡಾ. ಸಿ.ಜಿ. ಕುಶಾಲಪ್ಪ ಹೇಳಿದರು. ಕೊಡಗಿನಲ್ಲಿ 1,214 ದೇವರಕಾಡುಗಳಿದ್ದು, ಈ ವೈವಿಧ್ಯಮಯ ಪರಿಸರವನ್ನು ಸಂರಕ್ಷಿಸುವ ಅಗತ್ಯವಿದೆ ಎಂದರು.
ಪೇರೂರು ಇಗ್ಗುತ್ತಪ್ಪ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಚ್ಚುರ ಎಂ. ರವೀಂದ್ರ ಅವರು ಕೊಡಗಿನ ಪರಿಸರ, ಜಲ ಮತ್ತು ಧಾರ್ಮಿಕ ನೆಲೆಗಳ ಸಂರಕ್ಷಣೆ ಅಗತ್ಯವಿದೆ ಎಂದರು. ಮಲ್ಮ ಹಿತರಕ್ಷಣಾ ಸಮಿತಿಯ ಪ್ರಮುಖ ಮಣವಟ್ಟಿರ ಹರೀಶ್ ಕುಶಾಲಪ್ಪ ಅವರು ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ತಡೆಯಬೇಕಿದೆ ಎಂದು ಹೇಳಿದರು.
ಮೂಕಳೇರ ಕಾವ್ಯ ಅವರು ‘ಕೊಡಗು ಉಳಿಯಬೇಕು, ಕೊಡವಾಮೆ ಬೆಳೆಯಬೇಕು’ ಎಂಬ ಆಶಯದೊಂದಿಗೆ ‘ಕೊಡಗು ಶಕ್ತಿ ನಡಪು’ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನೆಲಜಿ ಇಗ್ಗುತ್ತಪ್ಪ ದೇವಾಲಯದ ಪ್ರಮುಖ ಮಾಳೆಯಂಡ ವಿಜು ಅಚ್ಚಪ್ಪ ಉಪಸ್ಥಿತರಿದ್ದರು.







