
ಮಡಿಕೇರಿ, NEWS DESK ಸೆ. 28: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸುತ್ತಿದೆ ಎಂದು ಆರೋಪಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಜ್ಞಾನೇಶ್ ಕುಮಾರ್ ಹಾಗೂ ‘ವಿಶ್ವ ಗುರು’ ಹೆಸರಿನ ಪ್ರತಿಕೃತಿಗಳನ್ನು ದಹಿಸಲು ಮುಂದಾದರು. ‘ವೋಟ್ ಚೋರಿ ನಿಲ್ಲಿಸಿ, ದೇಶ ಉಳಿಸಿ’, ‘ಡೌನ್ ಡೌನ್ ಜ್ಞಾನೇಶ್ ಕುಮಾರ್’, ‘ಸಂವಿಧಾನ ದೊಡ್ಡದು, ಸರ್ವಾಧಿಕಾರ ದೊಡ್ಡದಲ್ಲ’, ‘ಚುನಾವಣಾ ಆಯೋಗವು ಬಿಜೆಪಿ ಕಚೇರಿಯಾಗದಿರಲಿ’, ‘ಚುನಾವಣಾ ಆಯೋಗ ಒನ್ ಮ್ಯಾನ್ ಕಂಪೆನಿಯಲ್ಲ’ ಮೊದಲಾದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆದು ಬಂಧಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸದೆ, ಅರ್ಹ ಮತದಾರರನ್ನು ಮತದಾನದಿಂದ ವಂಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿಲುವುಗಳಿಂದ ಸಾಕಷ್ಟು ಗೊಂದಲಗಳು ನಿರ್ಮಾಣವಾಗಿವೆ ಎಂದು ಅವರು ದೂರಿದರು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜನಪರವಾದ ಹಲವು ವಿಚಾರಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದರೂ, ಕೇಂದ್ರ ಸರ್ಕಾರ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಪ್ರಸ್ತುತ ಎಸ್‌ಐಆರ್‌ಗೆ ಸಂಬಂಧಿಸಿದ ಗೊಂದಲಗಳಿಗೆ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರೇ ಕಾರಣರಾಗಿದ್ದು, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಪ್ರತಿಭಟನಾಕಾರರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ‘ವಿಶ್ವ ಗುರು’ ಹೆಸರಿನ ಪ್ರತಿಕೃತಿಗಳನ್ನು ದಹಿಸಲು ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಕೃತಿಯನ್ನು ಎಳೆದು ಬೆಂಕಿಯನ್ನು ನಂದಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಪ್ರಮುಖರಾದ ನೆರವಂಡ ಉಮೇಶ್, ಕೆ.ಯು. ಅಬ್ದುಲ್ ರಜಾಕ್, ಅಬ್ದುಲ್ ಲತೀಫ್, ಮಂದ್ರೀರ ಮೋಹನ ದಾಸ್, ಕೊಲ್ಯದ ಗಿರೀಶ್, ಕೆ.ಜಿ. ಪೀಟರ್, ಅಪ್ರು ರವೀಂದ್ರ, ನಾಪಂಡ ಮುತ್ತಪ್ಪ, ತೆನ್ನಿರ ಮೈನ, ಜುಲೇಕಾಬಿ, ಬಂಗೇರ, ಫ್ಯಾನ್ಸಿ ಮುತ್ತಣ್ಣ, ಲೀಲಾ ಶೇಷಮ್ಮ, ಸುಜು ತಿಮ್ಮಯ್ಯ, ಮೋಹನ್ ಮೌರ್ಯ, ಟಿ.ಆರ್. ಅರ್ಜುನ್, ಹನೀಫ್ ಸಂಪಾಜೆ, ಪ್ರಭು ರೈ, ಪುಷ್ಪಾ ಪೂಣಚ್ಚ, ಪ್ರಕಾಶ್ ಆಚಾರ್ಯ, ಪಟ್ಟಡ ರಂಜಿ ಪೂಣಚ್ಚ, ಮಂಜುನಾಥ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








