
ಸೋಮವಾರಪೇಟೆ ಸೆ.30 NEWS DESK : ಕೊಡ್ಲಿಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕೊಡ್ಲಿಪೇಟೆ ಹೋಬಳಿ ಘಟಕದ ನೂತನ ಸದಸ್ಯರ ಸೇರ್ಪಡೆ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕರವೇ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಂಚಾಲಕಿ ಶ್ರೀಮತಿ ದೀಪಾ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕವಿತಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಘಟಕ ಹಾಗೂ ಹೋರಾಟಗಾರ ವಸಂತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರವೇ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ದಾಸ್ ಮಾತನಾಡಿ, ಸಂಘಟನೆಯ ಶಿಸ್ತು ಹಾಗೂ ಪಾಲಿಸಬೇಕಾದ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು. ನಾಡು, ನುಡಿ ಹಾಗೂ ಜಲರಕ್ಷಣೆ ಸೇರಿದಂತೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಕಾರ್ಯಕರ್ತರು ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಕುಡುಪಜೆ ಹಾಗೂ ಕುಶಾಲನಗರ ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಚಾಲಕಿ ದೀಪಾ ಪೂಜಾರಿ ಮಾತನಾಡಿ, ಕೊಡ್ಲಿಪೇಟೆಯಲ್ಲಿ ಕರವೇ ಹೋಬಳಿ ಘಟಕ ಅಸ್ತಿತ್ವಕ್ಕೆ ಬಂದಿರುವುದು ಸಂತಸ ತಂದಿದೆ. ನೂತನ ಪದಾಧಿಕಾರಿಗಳು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿ ನಾಗರಿಕರಿಗೆ ನೆಮ್ಮದಿ ಹಾಗೂ ಶಾಂತಿಯುತ ಬದುಕು ಕಲ್ಪಿಸಲು ಶ್ರಮಿಸಬೇಕು. ಅಣ್ಣಾ ನಾರಾಯಣಗೌಡ ಅವರ ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’ ಎಂಬ ಘೋಷಣೆಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ನಾಡು ಕಟ್ಟುವ ಕಾಯಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕೊಡ್ಲಿಪೇಟೆ ಹೋಬಳಿ ಕರವೇ ಘಟಕದ ನೂತನ ಅಧ್ಯಕ್ಷರಾಗಿ ಶೋಭಿತ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಸಂತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘಟನೆಗಾಗಿ ಶ್ರಮಿಸಿದ ಶ್ರೀಮತಿ ಸುಪ್ರಿತಾ ಅವರನ್ನು ಶಾಲು ಹಾಗೂ ಹಾರ ಹಾಕಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಉಪಾಧ್ಯಕ್ಷ ಪಯಾಜ್ ಉದ್ದಿನ್, ಪ್ರಧಾನ ಕಾರ್ಯದರ್ಶಿ ಕುಮಾರ್ ದೇವಾಂಗ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಂತೋಷ್, ಮಹಿಳಾ ಅಧ್ಯಕ್ಷೆ ಆಶಾ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಕುಶಾಲನಗರ ತಾಲೂಕು ಪ್ರಧಾನ ಕಾರ್ಯದರ್ಶಿ ಗೀತಾ, ಕೊಡ್ಲಿಪೇಟೆಯ ಕವಿತಾ, ರೂಪ, ಮೇನಕ ಹಾಗೂ ಮಮತಾ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 60ಕ್ಕೂ ಹೆಚ್ಚು ಕಾರ್ಯಕರ್ತರು ಕರವೇ ಸಂಘಟನೆಗೆ ಸೇರ್ಪಡೆಯಾದರು. ನೂತನ ಸದಸ್ಯರಿಗೆ ಕನ್ನಡ ಶಾಲು ಹಾಕಿ ಗೌರವಪೂರ್ವಕವಾಗಿ ಸಂಘಟನೆಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಸಂಘಟಕರ ವತಿಯಿಂದ ಶಾಲು ಹಾಗೂ ಹಾರ ಹಾಕಿ ಗೌರವಿಸಲಾಯಿತು.
ಸಾಮಾಜಿಕ ಜಾಲತಾಣ ವಿಭಾಗದ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಬೋಪಯ್ಯ ಅವರು ಕಾರ್ಯಕ್ರಮದ ಚಿತ್ರಿಕರಣ ಹಾಗೂ ಛಾಯಾಚಿತ್ರಗಳನ್ನು ನಿರ್ವಹಿಸಿದರು. ಸಂಘಟಕ ಅವಿನಾಶ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.










