
ವಿರಾಜಪೇಟೆ ಅ.1 NEWS DESK : ಗೋವಾದ ಚೌಗುಲೇ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಯೂತ್ ಸ್ಪೋರ್ಟ್ಸ್ ಎಜುಕೇಷನ್ ಫೆಡರೇಷನ್ ಇಂಡಿಯಾ ವತಿಯಿಂದ ನಡೆದ ಅಂಡರ್-19 ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಚಿನ್ನದ ಪದಕ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಮಧ್ಯಪ್ರದೇಶ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿತು. ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಿ.ಕೆ. ತೇಜಸ್ ತಂಡದ ಗೆಲುವಿನಲ್ಲಿ ಭಾಗಿಯಾಗಿದ್ದಾರೆ. ವಿರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮದ ದಿವಂಗತ ಪಿ.ಸಿ. ಕಿನಿಶ್ ಹಾಗೂ ವಿಂಧ್ಯಾ ದಂಪತಿಯ ಪುತ್ರರಾದ ತೇಜಸ್, ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ತೇಜಸ್ ಅವರ ಸಾಧನೆಗೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ ಅವರು ಆಡಳಿತ ಮಂಡಳಿ ಹಾಗೂ ಕಾಲೇಜಿನ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎಲ್.ಆರ್. ರಾಘವೇಂದ್ರ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮುಖ್ಯಸ್ಥ ಸೋಮಣ್ಣ ಉಪಸ್ಥಿತರಿದ್ದರು.










