
ಮಡಿಕೇರಿ ಅ.3 NEWS DESK : ಎಲ್ಲರೂ ನಿಯಮಗಳಡಿಯಲ್ಲೇ ಜವಾಬ್ದಾರಿಯಿಂದ ದಸರಾ ಉತ್ಸವ ಆಚರಿಸಿ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಕೋರಿದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಶನಿವಾರ ನಡೆದ ಮಡಿಕೇರಿ, ಗೋಣಿಕೊಪ್ಪಲು ದಸರಾ ಹಾಗೂ ತಲಕಾವೇರಿ ಪವಿತ್ರ ತೀರ್ಥೋದ್ಭವ ಕುರಿತ ಸಭೆಯಲ್ಲಿ ಸಚಿವರು ಮಾತನಾಡಿದರು. ನಿಯಮಗಳನ್ನು ಸಡಿಲಿಸಿ ಎಂಬ ಬೇಡಿಕೆ ತಪ್ಪಲ್ಲ. ಆದರೆ, ಒಮ್ಮೆ ನಿಯಮಗಳನ್ನು ಸಡಿಲಿಸಿದರೆ ಮುಂದೆ ದಸರೆಯ ಸ್ವರೂಪವೇ ಬದಲಾಗಬಹುದು. ಹಾಗಾಗಿ, ನಿಯಮ ಮೀರದಂತೆ ಇತಿಮಿತಿಯಲ್ಲೇ ಉತ್ಸವ ಆಚರಿಸಿ ಎಂದು ಸಚಿವರು ಸಲಹೆ ನೀಡಿದರು. ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಎಲ್ಲರೂ ತಲೆಬಾಗಲೆಬೇಕು, ಅವುಗಳ ಮಿತಿಯಲ್ಲಿ ಹಬ್ಬ ಆಚರಿಸಿ ಎಂದು ಹೇಳಿದರು. ರಾಜ್ಯದ ಎಲ್ಲೆಡೆ ಭೀಕರ ಬರ ಆವರಿಸಿದೆ. ಇಂತಹ ಪರಿಸ್ಥಿತಿ ಅವಲೋಕಿಸಬೇಕು, ಸರ್ಕಾರ ಹಿಂದಿನಂತೆಯೇ ದಸರಾ ಉತ್ಸವ ಆಚರಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರು. ರಸ್ತೆ ದುರಸ್ತಿ ಕಾರ್ಯವನ್ನು ಶೀಘ್ರದಲ್ಲೇ ಮುಗಿಸಬೇಕು, ಸೆಸ್ಕ್‌ನವರು ಮಂಟಪಗಳು ಸಾಗುವ ಮಾರ್ಗದಲ್ಲಿ ಎಚ್ಚರಿಕೆ ವಹಿಸಿ, ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು, ಶೀಘ್ರದಲ್ಲಿ ಮರದ ಕೊಂಬೆಗಳನ್ನು ಅರಣ್ಯ ಇಲಾಖೆಯ ಕಡಿಯಬೇಕು ಎಂದು ಸೂಚಿಸಿದರು. ತಲಕಾವೇರಿ ಪವಿತ್ರ ತೀರ್ಥೋದ್ಭವಕ್ಕೂ ಸರ್ಕಾರ ಅನುದಾನ ನೀಡಿದೆ. ಅಧಿಕಾರಿಗಳು ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದರು. ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಸರ್ಕಾರ ಈಗಾಗಲೇ ದಸರಾಗೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಲಿದ್ದು, ಇನ್ನಷ್ಟು ಅನುದಾನ ಕೊಡಬೇಕು ಎಂದು ಮನವಿ ಮಾಡಿದರು. ಕಳೆದ ವರ್ಷ ಧ್ವನಿವರ್ಧಕದ ಮೇಲೆ ನಿಯಂತ್ರಣ ಹೇರಿದ್ದರಿಂದ ಜನರು ಕಡಿಮೆ ಬಂದಿದ್ದರು. ಆದಾಗ್ಯೂ ಸಮಿತಿ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಸಲಾಯಿತು. ಈ ಬಾರಿ ಹಾಗೆ ಆಗಬಾರದು ಎಂದು ಹೇಳಿದರು. ಮಡಿಕೇರಿ ದಸರಾ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್ ಮಾತನಾಡಿ, ‘ಹೆಚ್ಚು ಅನುದಾನ ನೀಡಿದರೆ ಇನ್ನಷ್ಟು ಹೆಚ್ಚಿನ ಉತ್ತಮ ಕಾರ್ಯಕ್ರಮಗಳನ್ನು ನೀಡಬಹುದು. ಹಾಗಾಗಿ, ಇನ್ನಷ್ಟು ಹೆಚ್ಚಿನ ಅನುದಾನ ನೀಡಿ ಎಂದು ಕೋರಿದರು. ಮಡಿಕೇರಿ ನಗರಸಭೆ ಉಪಾಧ್ಯಕ್ಷಾದ ಮಹೇಶ್ ಜೈನಿ ಮಾತನಾಡಿ, ‘ರಸ್ತೆ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಬೇಕು’ ಎಂದು ಹೇಳಿದರು. ‘ರಾತ್ರಿ 10 ಗಂಟೆಗೆ ಧ್ವನಿವರ್ಧಕ ನಿಲ್ಲಿಸಿ ಎಂದು ಪೊಲೀಸರು ತಕರಾರು ಮಾಡುತ್ತಾರೆ. ದಯವಿಟ್ಟು ಕಾರ್ಯಕ್ರಮ ಪೂರ್ಣಗೊಳಿಸಲು ಬಿಡಿ. ನಾವೇನೂ ದೊಡ್ಡ ಮಟ್ಟದಲ್ಲಿ ಶಬ್ದ ಮಾಡುವುದಿಲ್ಲ’ ಎಂದರು. ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಡಿಕೇರಿ ದಸರಾ ಉತ್ಸವ ಕುರಿತ ಮಾಹಿತಿ ನೀಡಿದರೆ, ಗೋಣಿಕೊಪ್ಪಲು ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಗೋಣಿಕೊಪ್ಪಲು ದಸರಾ ಕುರಿತು ಮಾಹಿತಿ ನೀಡಿದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಮಾತನಾಡಿದರು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಡಿಸಿಎಫ್ ಅಭಿಷೇಕ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶಿಲ್ದಾರರು, ಇತರರು ಭಾಗವಹಿಸಿದ್ದರು.










