ಮಡಿಕೇರಿ, NEWS DESK ಅ.7: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಕ್ರೀಡಾಕೂಟಗಳನ್ನು ಅ.11ರಿಂದ 20ರವರೆಗೆ ಆಯೋಜಿಸಲಾಗಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಹೋರಿ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಸರಾ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಅವರು ಕಾರ್ಯಕ್ರಮಗಳ ವಿವರ ನೀಡಿದರು.
ಅ.11ರಂದು ಬೆಳಿಗ್ಗೆ 6.30 ಗಂಟೆಗೆ ಜನರಲ್ ತಿಮ್ಮಯ್ಯ ವೃತ್ತದಿಂದ ವಿವಿಧ ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಉದ್ಘಾಟಿಸಲಿದ್ದಾರೆ. ಅದೇ ದಿನ ಬೆಳಿಗ್ಗೆ 9.30ಕ್ಕೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ವಕೀಲ ಎಂ.ಇ.ಮೋಹನ್ ಕುಮಾರ್ ಉದ್ಘಾಟಿಸಲಿದ್ದಾರೆ.
ಅ.12ರಂದು ಬೆಳಿಗ್ಗೆ 9.30ಕ್ಕೆ ನಗರದ ರಾಜ್ ದರ್ಶನ್ ಸಭಾಂಗಣದಲ್ಲಿ ಚೆಸ್ ಪಂದ್ಯಾವಳಿ ನಡೆಯಲಿದೆ. ಮಡಿಕೇರಿ ಟೌನ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಜಗದೀಶ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.
ಅ.13ರಂದು ಅಥ್ಲೆಟಿಕ್ಸ್ ಮತ್ತು ಟ್ರ್ಯಾಕ್ ಸ್ಪರ್ಧೆ ಉದ್ಘಾಟನೆ
ಅ.13ರಂದು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಮತ್ತು ಟ್ರ್ಯಾಕ್ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಬನ್ನಿಮಂಟಪದಿಂದ ಕ್ರೀಡಾಂಗಣದವರೆಗೆ ಕ್ರೀಡಾ ಜ್ಯೋತಿಯನ್ನು ಮಾಸ್ಟರ್ ಅಥ್ಲೆಟಿಕ್ಸ್ ನ್ಯಾಷನಲ್ ಗೋಲ್ಡ್ ಮೆಡಲಿಸ್ಟ್ ಐಮುಡಿಯಂಡ ಶೈಲಾ ಕುಶಾಲಪ್ಪ ಹಾಗೂ ಕಿಕ್ ಬಾಕ್ಸಿಂಗ್ ಗೋಲ್ಡ್ ಮೆಡಲಿಸ್ಟ್ ಚಿರಾಗ್ ಸುರೇಶ್ ಪಿ. ತರಲಿದ್ದಾರೆ.
ಬೆಳಿಗ್ಗೆ 9.30ಕ್ಕೆ ಉದ್ಯಮಿ ಎಡಿಕೇರಿ ಪ್ರಸನ್ನ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಅವರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಅಂದು ವಿವಿಧ ವಿಭಾಗಗಳ ಓಟದ ಸ್ಪರ್ಧೆ, ರಿಂಕ್ ಹಾಕಿ, ಭಾರದ ಗುಂಡು ಎಸೆತ, ವಾಲಿಬಾಲ್, ಹಗ್ಗಜಗ್ಗಾಟ, ಥ್ರೋಬಾಲ್, ನಿಧಾನಗತಿಯ ದ್ವಿಚಕ್ರ ವಾಹನ ಚಾಲನೆ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳು ನಡೆಯಲಿವೆ.
ವಿವಿಧ ದಿನಗಳಲ್ಲಿ ಹಲವು ಸ್ಪರ್ಧೆಗಳು
ಅ.14ರಂದು ರಾಜ್ ದರ್ಶನ್ ಸಭಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಕೇರಂ ಪಂದ್ಯಾವಳಿ ನಡೆಯಲಿದ್ದು, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಉದ್ಘಾಟಿಸಲಿದ್ದಾರೆ.
ಅ.15ರಂದು ಸಂಜೆ 4 ಗಂಟೆಗೆ ರಾಜ್ ದರ್ಶನ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ಅ.16ರಂದು ಇದೇ ಸಭಾಂಗಣದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ಅ.17ರಂದು ಬೆಳಿಗ್ಗೆ 9.30ಕ್ಕೆ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
ಅ.18ರಂದು ಬೆಳಿಗ್ಗೆ 9.30ಕ್ಕೆ ಗಾಂಧಿ ಮೈದಾನದಲ್ಲಿ “ಹಳ್ಳಿ ಕರ್ ತಳಿ ಹೋರಿ ಪ್ರದರ್ಶನ” ನಡೆಯಲಿದೆ. ಅ.19ರಂದು ಸಂಜೆ 5 ಗಂಟೆಗೆ ರಾಜ್ ದರ್ಶನ್ ಸಭಾಂಗಣದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
ಅ.20ರಂದು ಸಂಜೆ 7.30ಕ್ಕೆ ಗಾಂಧಿ ಮೈದಾನದಲ್ಲಿ ದಸರಾ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರದೀಪ್ ಕರ್ಕೇರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಕ್ರೀಡಾ ಸಮಿತಿ ಪ್ರಧಾನ ಕಾರ್ಯದರ್ಶಿ T. ವಾಗೀಶ್, ಗೌರವ ಸಲಹೆಗಾರರಾದ ಕ್ರಿಸ್ಟೋಫರ್, ಸಹ ಕಾರ್ಯದರ್ಶಿ ಚರಣ್ ಕುಮಾರ್, ಕ್ರೀಡಾಕೂಟದ ಸಂಚಾಲಕ ಭರತ್ ಕಾವೇರಿಮನೆ ಹಾಗೂ ಖಜಾಂಚಿ ಬಲ್ಯದ ಯೇಣುಕುಮಾರ್ ಉಪಸ್ಥಿತರಿದ್ದರು.

















