ಮಡಿಕೇರಿ, NEWS DESK ಅ.7: ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯ ಕಡಿಯತ್ತೂರು ಗ್ರಾಮದ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಭಗವತಿ ದೇವಸ್ಥಾನದ ವಿವಿಧ ಜೀರ್ಣೋದ್ಧಾರ ಕಾಮಗಾರಿಗಳಿಗೆ ಗ್ರಾಮದ ದಾನಿಗಳಾದ ಪ್ರಕಾಶ್ ರೈ, ಉಷಾ ರೈ ದಂಪತಿ ಹಾಗೂ ಕುಟುಂಬದವರು ರೂ.12.78 ಲಕ್ಷ ನೆರವು ನೀಡಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ ಗ್ರಾಮಸ್ಥರು ಶ್ರೀ ಭಗವತಿ ದೇವಸ್ಥಾನದ ತೀರ್ಥ ಮಂಟಪವನ್ನು ಪುನರ್ ನಿರ್ಮಿಸಿದ್ದರು. ಇದೀಗ ದೇವಸ್ಥಾನದ ಮೇಲ್ಛಾವಣಿ, ಅಂಗಳ, ಸಭಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ, ಉಷಾ ರೈ ದಂಪತಿ ಹಾಗೂ ಕುಟುಂಬದವರು ತಮ್ಮ ತಂದೆ ದಿ. ಮಂಜಪ್ಪ ರೈ, ತಾಯಿ ದಿ. ನಿಲಮ್ಮ ರೈ ಹಾಗೂ ಸಹೋದರ ದಿ. ರವಿ ರೈ ಅವರ ಜ್ಞಾಪಕಾರ್ಥವಾಗಿ ರೂ.12.78 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ.
ಪ್ರಕಾಶ್ ರೈ ಅವರು ಗ್ರಾಮದ ದೇವಸ್ಥಾನಗಳ ವಿವಿಧ ಪೂಜಾ ಕೈಂಕರ್ಯಗಳಿಗೂ ನಿರಂತರವಾಗಿ ಆರ್ಥಿಕ ನೆರವು ನೀಡುತ್ತಿದ್ದು, ಇದೀಗ ಶ್ರೀ ಭಗವತಿ ದೇವನೆಲೆಯ ಅಭಿವೃದ್ಧಿ ಕಾಮಗಾರಿಗಳಿಗೂ ಉದಾರವಾಗಿ ಕೊಡುಗೆ ನೀಡಿದ್ದಾರೆ.
ಇಂದಿನ ಸಮಾಜದಲ್ಲಿ ದಾನ ಮಾಡುವ ಮನಸ್ಸಿದ್ದರೂ ಆರ್ಥಿಕವಾಗಿ ನೆರವು ನೀಡಲು ಸಾಧ್ಯವಾಗದವರೇ ಹೆಚ್ಚಾಗಿರುವ ಸಂದರ್ಭದಲ್ಲಿ, ತಮ್ಮ ಕುಟುಂಬದವರ ಜ್ಞಾಪಕಾರ್ಥವಾಗಿ ದೇವಸ್ಥಾನದ ಅಭಿವೃದ್ಧಿಗೆ ಉದಾರ ಕೊಡುಗೆ ನೀಡಿರುವ ಪ್ರಕಾಶ್ ರೈ, ಉಷಾ ರೈ ದಂಪತಿ ಹಾಗೂ ಕುಟುಂಬದವರ ಸೇವೆ ಶ್ಲಾಘನೀಯವಾಗಿದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.
ಶ್ರೀ ಭಗವತಿ ದೇವನೆಲೆಯ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ ಪ್ರಕಾಶ್ ರೈ, ಉಷಾ ರೈ ದಂಪತಿ ಹಾಗೂ ಕುಟುಂಬದವರಿಗೆ ಕಡಿಯತ್ತೂರು ತಕ್ಕ ಮುಖ್ಯಸ್ಥರು ಮತ್ತು ಗ್ರಾಮಸ್ಥರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕಡಿಯತ್ತೂರು ಶ್ರೀ ಭಗವತಿ ದೇವಸ್ಥಾನವನ್ನು ಹಿಂದಿನ ಕಾಲದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ನಿರ್ಮಿಸಿದ್ದರು. ಬಳಿಕ 1990ರಲ್ಲಿ ಗ್ರಾಮಸ್ಥರು ಜೀರ್ಣೋದ್ಧಾರ ಸಮಿತಿ ರಚಿಸಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದರು. ಇದೇ ರೀತಿ ಗ್ರಾಮದ ಶ್ರೀ ಶಸ್ತಾವು ದೇವಸ್ಥಾನ ಸೇರಿದಂತೆ ವಿವಿಧ ದೇವನೆಲೆಗಳನ್ನೂ ಗ್ರಾಮಸ್ಥರ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದೆ.
ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನವನ್ನೂ ಪೊರೆಯನ ಸತೀಶ್ ಅವರು ಸುಸಜ್ಜಿತವಾಗಿ ಜೀರ್ಣೋದ್ಧಾರಗೊಳಿಸಿದ್ದಾರೆ ಎಂದು ತಕ್ಕ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

















