ಸುಂಟಿಕೊಪ್ಪ, NEWS DESK ಅ. 11: ಏಳನೇ ಹೊಸಕೋಟೆಯ ಹಿಂದೂ ಗೆಳೆಯರ ಬಳಗ ಸೇವಾ ಸಮಿತಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಟಿ.ವಿ. ಪ್ರಕಾಶ್ (ಉಣ್ಣಿ) ಅವರು ಆಯ್ಕೆಯಾಗಿದ್ದಾರೆ.
ಏಳನೇ ಹೊಸಕೋಟೆಯ ಶ್ರೀ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ಆರ್. ಶರವಣ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಬಿ.ಕೆ. ದಿನೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಿಜೇಶ್, ಸಹ ಕಾರ್ಯದರ್ಶಿಯಾಗಿ ನಾಗರಾಜ್, ಖಜಾಂಚಿಯಾಗಿ ಪಿ.ಎ. ಸದೀಶ್ ಹಾಗೂ ಉಪಖಜಾಂಚಿಯಾಗಿ ಸುರೇಶ್ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಈ.ಪಿ. ಬಿನು, ರೋಹಿತಾಕ್ಷ, ಹೇಮಂತ, ಮೋಹನ್ ರಾಜ್, ಪ್ರಶಾಂತ್ ಮತ್ತು ಕೃಷ್ಣಪ್ರಸಾದ್ ಅವರನ್ನು ನೇಮಕ ಮಾಡಲಾಯಿತು.
ನೂತನ ಅಧ್ಯಕ್ಷ ಟಿ.ವಿ. ಪ್ರಕಾಶ್ ಮಾತನಾಡಿ, ಹಿಂದೂ ಗೆಳೆಯರ ಬಳಗವು ಕಳೆದ ಎರಡು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಗ್ರಾಮಗಳಲ್ಲಿ ನಡೆಯುವ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಕಳೆದ ವರ್ಷದ ಲೆಕ್ಕಪತ್ರಗಳನ್ನು ಮಂಡಿಸುವುದರ ಜೊತೆಗೆ ವಾರ್ಷಿಕ ವರದಿಯನ್ನು ಸಮಿತಿಯ ಸದಸ್ಯರ ಮುಂದಿಡಲಾಯಿತು.

















