ವಿರಾಜಪೇಟೆ, NEWS DESK ಅ.11: ವೃದ್ಧಾಪ್ಯದಲ್ಲಿ ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಬದಲು ಅವರಿಗೆ ಪ್ರೀತಿ, ಗೌರವ ಹಾಗೂ ಸೂಕ್ತ ಆರೈಕೆ ನೀಡಬೇಕು. ಪ್ರತಿಯೊಬ್ಬರೂ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿನ ಹಿರಿಯರ ಸಮಸ್ಯೆಗಳನ್ನು ಆಲಿಸಿ, ತಮ್ಮ ಕೈಲಾದ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅಖಿಲ ಕೊಡವ ಕೆಂಬಟ್ಟಿ ಸಮಾಜದ ಅಧ್ಯಕ್ಷ ಬಿಲ್ಲರಿ ಕುಟ್ಟಡ ಪ್ರಭು ಅಯ್ಯಪ್ಪ ಕರೆ ನೀಡಿದರು.
ಕೊಡವ ಕೆಂಬಟ್ಟಿ ಬಾಳಡ್ ಮತ್ತು ಅಖಿಲ ಕೊಡವ ಕೆಂಬಟ್ಟಿ ಸಮಾಜದ ವತಿಯಿಂದ ಬೇಟೋಳಿ ಗ್ರಾಮದ ಶಕ್ತಿ ವೃದ್ಧಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಅನ್ನದಾನ ಹಾಗೂ ಹೊದಿಕೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಸಾಕಿ, ಸಲಹಿ ಉತ್ತಮ ಜೀವನ ರೂಪಿಸಿಕೊಟ್ಟ ತಂದೆ-ತಾಯಿಯರನ್ನು ವೃದ್ಧಾಪ್ಯದಲ್ಲಿ ಆರೈಕೆ ಮಾಡಲು ಸಾಧ್ಯವಾಗದೆ ಕುಟುಂಬದಿಂದ ದೂರವಿಟ್ಟು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ವಿಷಾದನೀಯ. ಇಂತಹ ಮನೋಭಾವ ಬದಲಾಗಬೇಕು. ಶಿಕ್ಷಿತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ವೃದ್ಧಾಶ್ರಮಗಳ ಹೆಚ್ಚಳವೂ ಒಂದು ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯ ಸಂಘಜೀವಿಯಾಗಿದ್ದು, ತಾನು ಸಂಪಾದಿಸುವ ಸಂಪತ್ತಿನಲ್ಲಿ ಒಂದು ಭಾಗವನ್ನು ವೃದ್ಧಾಶ್ರಮಗಳು ಹಾಗೂ ಅನಾಥಾಶ್ರಮಗಳ ನೆರವಿಗೆ ಮೀಸಲಿಡಬೇಕು. ಹಬ್ಬ-ಹರಿದಿನಗಳು ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ಅಲ್ಲಿನ ಹಿರಿಯರೊಂದಿಗೆ ಸಮಯ ಕಳೆಯಬೇಕು. ಅವರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ತಿಳಿಸಿದರು.
ಸಮಾಜದ ಬಿದ್ದಣಕುಟ್ಟಡ ರೋಹಿಣಿ ಪುಷ್ಪ ಮಾತನಾಡಿ, ಬೇಟೋಳಿ ಗ್ರಾಮದ ಶಕ್ತಿ ವೃದ್ಧಾಶ್ರಮದಲ್ಲಿ ಆಯೋಜಿಸಿದ ಈ ಮಹತ್ವದ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಹಾಗೂ ಬಡವರಿಗೆ ನೆರವಾಗುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಚವರೆಕುಟ್ಟಡ ಸುಬ್ರಮಣಿ ಮಾತನಾಡಿ, ಸಮಾಜದ ವತಿಯಿಂದ ಮುಂದಿನ ದಿನಗಳಲ್ಲಿಯೂ ಸರ್ವರ ಸಹಕಾರದೊಂದಿಗೆ ವಿನೂತನ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿಯೊಬ್ಬರೂ ವೃದ್ಧಾಶ್ರಮಗಳಲ್ಲಿರುವ ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು. ತಮ್ಮ ಸಂಪಾದನೆಯ ಒಂದು ಭಾಗವನ್ನು ಬಡವರ ನೆರವಿಗೆ ವಿನಿಯೋಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಚಿಮ್ಮಿಕುಟ್ಟಡ ನಿತೇಶ್, ಸಮಾಜದ ಕಾರ್ಯಾಧ್ಯಕ್ಷ ಕುವಳೆಕುಟ್ಟಡ ಗಿರೀಶ್, ಚಟ್ಟಕುಟ್ಟಡ ಸುಬ್ಬಕ್ಕಿ ಮುತ್ತಪ್ಪ, ಚವರೆಕುಟ್ಟಡ ದೇವಕಿ, ಉಮ್ಮಣಕುಟ್ಟಡ ಡಾಲಿ ಇಂದಿರಾ, ಚಿಮ್ಮಿಕುಟ್ಟಡ ಗಿರೀಶ್ ರೂಪ, ಚಿಮ್ಮಿಕುಟ್ಟಡ ವಿಲ್ಮಾ ಅಶೋಕ್, ಉಮ್ಮಣಕುಟ್ಟಡ ನಿಷ್ಮಾ, ಚಿಮ್ಮಿಕುಟ್ಟಡ ಶಿವಾನಿ ಅಶೋಕ್, ಬಿಲ್ಲರಿಕುಟ್ಟಡ ಸ್ನೇಹ, ಚಿಮ್ಮಿಕುಟ್ಟಡ ವಿಬಿನ್ ಕುಶಾಲಪ್ಪ, ಚಟ್ಟಕುಟ್ಟಡ ಶಶಿ ಅಚ್ಚಪ್ಪ, ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಹನುಮಂತ್, ಸಮಾಜದ ಸದಸ್ಯರು ಹಾಗೂ ವೃದ್ಧಾಶ್ರಮದ ಹಿರಿಯರು ಉಪಸ್ಥಿತರಿದ್ದರು.

















