ಸುಂಟಿಕೊಪ್ಪ, NEWS DESK ಅ. 15: ಸಮಾಜಸೇವಕ ಎಡಿಕೇರಿ ಪ್ರಸನ್ನ ಅವರ ಅಭಿಮಾನಿ ಸಂಘದ ವತಿಯಿಂದ ಮಡಿಕೇರಿ ಜಿಲ್ಲಾ ವೈದ್ಯಕೀಯ ಸಂಸ್ಥೆ ಹಾಗೂ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸತೋಟದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಹೊಸತೋಟದ ಹಿರಿಯ ನಾಗರಿಕರು ಹಾಗೂ ಕೇಂದ್ರ ಸರ್ಕಾರಿ ನೌಕರರಾಗಿ ನಿವೃತ್ತರಾದ ಎನ್.ಎಂ. ಉಲ್ಲಾಸ ಅವರ ಉಪಸ್ಥಿತಿಯಲ್ಲಿ ಸಮಾಜಸೇವಕ ಎಡಿಕೇರಿ ಪ್ರಸನ್ನ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಪ್ರಸನ್ನ ಅವರ ಅಭಿಮಾನಿ ಸಂಘದ 30 ಮಂದಿ ಸದಸ್ಯರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಡಿಕೇರಿ ಪ್ರಸನ್ನ ಅವರು, ರಕ್ತದಾನವು ಶ್ರೇಷ್ಠ ದಾನವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಸಕಾಲದಲ್ಲಿ ರಕ್ತ ದೊರೆತರೆ ಅವರ ಜೀವ ಉಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಜನತೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಕರುಂಬಯ್ಯ ಅವರು ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿ ಜಾತಿ, ಧರ್ಮದ ಭೇದವಿಲ್ಲದೆ ರಕ್ತದಾನ ಮಾಡಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
















