ಸುಂಟಿಕೊಪ್ಪ, NEWS DESK ಅ. 15: ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ 19ನೇ ವರ್ಷದ ಓಣಂ ಆಚರಣೆಯ ಅಂಗವಾಗಿ ಗುರುವಾರ ಪಟ್ಟಣದಲ್ಲಿ ಸಂಭ್ರಮದ ಘೋಷಯಾತ್ರೆ ನಡೆಯಿತು. ಕೇರಳದ ಸಾಂಪ್ರದಾಯಿಕ ಚಂಡೆ ವಾದ್ಯ, ಮಾವೇಲಿ ವೇಷಧಾರಿಯೊಂದಿಗೆ ಮಲಯಾಳಿ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮಲಯಾಳಿ ಸಮಾಜದ ಸದಸ್ಯರು ಕೇರಳದ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಬಿಳಿ ಬಣ್ಣದ ಪಟ್ಟು ಸೀರೆ ಹಾಗೂ ಪುರುಷರು ಬಿಳಿ ಪಂಚೆ ಮತ್ತು ಬಿಳಿ ಅಂಗಿಯನ್ನು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಪಟ್ಟಣದ ಶ್ರೀರಾಮ ಮಂದಿರದಿಂದ ಆರಂಭಗೊಂಡ ಘೋಷಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗದ್ದೆಹಳ್ಳದ ಎಸ್ಎಸ್ ಇಂಟರ್ನ್ಯಾಷನಲ್ ಸಭಾಂಗಣದವರೆಗೆ ಸಾಗಿತು. ಮೆರವಣಿಗೆಯಲ್ಲಿ ಮಾವೇಲಿ ಚಕ್ರವರ್ತಿ, ಶ್ರೀಕೃಷ್ಣ, ರಾಧೆ ಹಾಗೂ ನಾರಾಯಣಗುರುಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು. ಬಳಿಕ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಮರಳುವ ಮೂಲಕ ಸಮಾಪ್ತಿಗೊಂಡಿತು.
ಈ ಸಂದರ್ಭದಲ್ಲಿ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಕೆ. ವಾಸುದೇವ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಕಮಲಾಸನ್, ವಿ.ಕೆ. ರಾಜು, ವೇಲಾಯುಧನ್, ಶಶಿಕುಮಾರ್, ಟಿ.ಕೆ. ಹರೀಶ್, ಸಂಘಟನಾ ಕಾರ್ಯದರ್ಶಿ ಕೆ. ಕನೀಷ್ ಕುಮಾರ್, ಕೆ.ಪಿ. ವಿನೋದ್, ಭಾಸ್ಕರನ್, ವಿ.ಎ. ಸಂತೋಷ್ ಕುಮಾರ್, ರಮೇಶ್ ಪಿಳ್ಳೆ, ಪಿ.ಸಿ. ಮೋಹನ್, ಪಿ.ಸಿ. ಸುರೇಶ್, ವಿ. ಶೈಜಾ ಸುಧಾ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ತುಳಸಿ, ಶೋಭಾ, ಅಕ್ಷತಾ, ಸುಜಿತಾ, ಚಂದ್ರಿಕಾ, ರಂಜಿನಿ, ಗೀತಾದೇವಿ, ಕವಿತಾ, ಪ್ರಭಾಕರ್, ಮಂಜುಳಾ ಸುಕುಮಾರ್, ಸುಜಾತ, ಶ್ಯಾಮಲ, ಸ್ವರ್ಣ, ಪಿ.ಆರ್. ಸುಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ನೂರಾರು ಸಂಖ್ಯೆಯಲ್ಲಿ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಹಾಗೂ ಪುರುಷರು ಭಾಗವಹಿಸಿ ಓಣಂ ಸಂಭ್ರಮಕ್ಕೆ ಮೆರುಗು ನೀಡಿದರು.

















