ಮಡಿಕೇರಿ ಅ.15 NEWS DESK : ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವದ ಸಂಭ್ರಮದ ನಡುವೆ, ಚಿಣ್ಣರಿಗಾಗಿ ಆಯೋಜಿಸಲಾಗಿದ್ದ 13 ನೇ ವರ್ಷದ ‘ಮಕ್ಕಳ ದಸರಾ’ ಕಾರ್ಯಕ್ರಮವು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಗಾಂಧಿ ಮೈದಾನದ ‘ಕಲಾ ಸಂಭ್ರಮ’ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು. ಪುಟಾಣಿಗಳಲ್ಲಿ ಮೂಡಿದ್ದ ಉತ್ಸಾಹ ಹಾಗೂ ಕಲಾ ಪ್ರತಿಭೆಗಳು ಸಾರ್ವಜನಿಕರ ಗಮನ ಸೆಳೆಯಿತು. ಮಕ್ಕಳ ಸಂತೆಯಲ್ಲಿ ಮಕ್ಕಳ ವ್ಯಾಪಾರ, ವ್ಯವಹಾರ ವಹಿವಾಟು ಜೋರಾಗಿಯೇ ನಡೆಯಿತು. ಮಕ್ಕಳ ಸಂತೆ ಮತ್ತು ಅಂಗಡಿ ಸ್ಪರ್ಧೆ: ಪುಟಾಣಿಗಳಿಂದಲೇ ತೆರೆಯಲ್ಪಟ್ಟ ಮಳಿಗೆಗಳು ಹಾಗೂ ಸಂತೆ ವಹಿವಾಟು ನೆರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿತು. ಪಾಲಕ್, ಮೆಂತೆ, ಸಬ್ಸಿಗೆ, ದಂಟು, ಕೀರೆ, ಗಣಿಕೆ, ನೊಗ್ಗೆ, ಬಸಳೆ, ಎಲೆಕೋಸು, ವೀಳ್ಯದೆಲೆಯಿಂದ ಹಿಡಿದು ಎಲ್ಲಾ ರೀತಿಯ ಸೊಪ್ಪುಗಳು, ತರಕಾರಿ ವಿಭಾಗದಲ್ಲಿ ಕುಂಬಳ, ಬೂದುಕುಂಬಳ, ಸೌತೆಕಾಯಿ, ಸೋರೆಕಾಯಿ ವಿವಿಧ ರೀತಿಯ ತರಕಾರಿಗಳು, ಹಣ್ಣುಗಳಲ್ಲಿ ಬಾಳೆ, ಕಿತ್ತಳೆ, ಚಕೋತಾ, ಸೇಬು, ಮತ್ತೊಂದು ಬದಿಯಲ್ಲಿ ಪಾನಿಪೂರಿ, ಮಸಾಲಪೂರಿ, ಸೇರಿದಂತೆ ವಿವಿಧ ರೀತಿಯ ತಂಪು ಪಾನೀಯ ಹೀಗೆ ಒಂದು ಬದಿಯಲ್ಲಿ ಸೊಪ್ಪು ತರಕಾರಿ ಇದ್ದರೆ, ಮತ್ತೊಂದು ಬದಿಯಲ್ಲಿ ತಿಂಡಿ ತಿನಿಸು ವ್ಯಾಪಾರ ಎಲ್ಲರನ್ನು ಆಕರ್ಷಣಿಯಗೊಳಿಸಿತು. ಜೊತೆಗೆ ತಿಂಡಿ ತಿನಿಸುಗಳು ಪ್ರತಿಯೊಬ್ಬರ ಬಾಯಲ್ಲಿ ನೀರು ಭರಿಸುವಂತೆ ಮಾಡಿತ್ತು. ವಿವಿಧ ಪೌರಾಣಿಕ, ಐತಿಹಾಸಿಕ ಹಾಗೂ ರಾಷ್ಟ್ರೀಯ ನಾಯಕರ ವೇಷಭೂಷಣಗಳಲ್ಲಿ ಕಂಗೊಳಿಸಿದ ಮಕ್ಕಳು ನೋಡುಗರ ಕಣ್ಮನ ಸೆಳೆದರು. ಮಕ್ಕಳ ಸೃಜನಶೀಲತೆಯನ್ನು ಹೊರಹಾಕಲು ಮಂಟಪ ರಚನಾ ಸ್ಪರ್ಧೆಗಳು ಬಹಳಷ್ಟು ಮೆಚ್ಚುಗೆ ಗಳಿಸಿದವು. ಮಡಿಕೇರಿ ದಸರಾ ಮಂಟಪವೇ ಕಣ್ತುಂಬಿಕೊಳ್ಳುವಂತೆ ಕಿರುಮಂಟಪ ಮಾದರಿಯಲ್ಲಿ ಐತಿಹಾಸಿಕ ಸಂದೇಶ ಸಾರಿದ್ದು ವಿಶೇಷವಾಗಿತ್ತು, ಪೌರಾಣಿಕ ಮಂಟಪ ಮೂಲಕ ಚಿತ್ರಣ ಗಮನ ಸೆಳೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ, ಮಕ್ಕಳ ವ್ಯಾಪಾರ ವಹಿವಾಟಿನ ಬಗ್ಗೆ ತಿಳಿದುಕೊಳ್ಳಲು ಮಕ್ಕಳ ಸಂತೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆಯಿಂದ ಜಿಲ್ಲೆಯಲ್ಲಿರುವ ಐದು ವಿಷಯಗಳನ್ನು ತೆಗೆದುಕೊಂಡು ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಜಿಲ್ಲೆಯಲ್ಲಿ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಬೇಕು. ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರು ಪ್ರೋತ್ಸಾಹ ನೀಡುವಂತಾಗಬೇಕು ಎಂದು ಕರೆ ನೀಡಿದರು. ಮಕ್ಕಳ ಸಂತೆ, ಅಂಗಡಿ ಸ್ಪರ್ಧೆಯನ್ನು ರೋಟರಿ ಜಿಲ್ಲೆ 3181 ನ ರಾಜ್ಯಪಾಲ ಸತೀಶ್ ಭೊಳಾರ್ ಅವರು ಉದ್ಘಾಟಿಸಿ ಮಾತನಾಡಿ, ದಸರಾ ಉತ್ಸವದ ಪ್ರಯುಕ್ತ ರೋಟರಿ ಸಂಸ್ಥೆಯಿಂದ ‘ರೋಟರಿ ನವರಂಗ’ ಎಂಬ ಕಲ್ಪನೆಯೊಂದಿಗೆ ಅನ್ನದಾನ, ಆರೋಗ್ಯ ಸೇವೆ, ಪರಿಸರ ಜಾಗೃತಿ, ಹಿರಿಯ ನಾಗರಿಕರಿಗೆ ಗೌರವ ಸೇರಿದಂತೆ ಒಂಭತ್ತು ದಿವಸದ ವಿಶಿಷ್ಟ ಕಾರ್ಯಕ್ರಮ ನಡೆಸುತ್ತಿದೆ. ಎಲ್ಲಾ ಸಂಘ-ಸಂಸ್ಥೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಸರ್ಕಾರದ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬುವುದರ ಜೊತೆಗೆ ಅವರಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸಲು ಸಹಕಾರಿಯಾಗಿದೆ. ಅಲ್ಲದೆ, ಮಕ್ಕಳಲ್ಲಿ ಧಾರ್ಮಿಕ ಭಾವನೆ ದೇಶ ಭಕ್ತಿ ಮೂಡುತ್ತದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವುದು ರೋಟರಿ ಮಿಸ್ಟಿ ಹಿಲ್ಸ್ನ ಕಾರ್ಯ ಶ್ಲಾಘನೀಯ ಎಂದರು.
ನಾವು ಮಾಡುವ ಯಾವುದೇ ಹಬ್ಬ, ಆಚರಣೆ ಅಥವಾ ಸಂಪ್ರದಾಯಗಳು ಕೇವಲ ಬಾಹ್ಯ ಪ್ರದರ್ಶನಕ್ಕμÉ್ಟೀ ಸೀಮಿತವಾಗದೆ, ವ್ಯಕ್ತಿಯ ಒಳಗಿನಿಂದ ಮೂಡಿಬರುವ ಸದ್ಭಾವನೆ ಮತ್ತು ನಡವಳಿಕೆಯ ಬದಲಾವಣೆಗೆ ಸಾಕ್ಷಿಯಾದಾಗ ಮಾತ್ರ ಅವುಗಳಿಗೆ ನೈಜ ಸಾರ್ಥಕತೆ ಲಭಿಸುತ್ತದೆ. ಹಿರಿಯರನ್ನು, ತಂದೆ-ತಾಯಿಯರನ್ನು ಗೌರವದಿಂದ ಕಾಣುವಂತಾಗಬೇಕು ಎಂದು ಹೇಳಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ಅವರು ಮಾತನಾಡಿ, ಮಕ್ಕಳ ದಸರಾ ಕಾರ್ಯಕ್ರಮ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದ್ದು, ಅವರ ಕನಸುಗಳಿಗೆ ಅವಕಾಶ ನೀಡಿದೆ. ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು. ರೋಟರಿ ವಲಯ 6 ರ ಸಹಾಯಕ ಗವರ್ನರ್ ಎಚ್.ಎಸ್.ವಸಂತ್ ಕುಮಾರ್, ವಲಯ ಸೇನಾನಿ ಮಧುಸೂದನ್ ಇದ್ದರು. ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ಸ್ವಾಗತಿಸಿ, ನಿರೂಪಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಜಿ.ಡಿ.ಚೇತನ್ ವಂದಿಸಿದರು.



























