ಮಡಿಕೇರಿ, NEWS DESK ಅ. 17: ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗು ನೀಡುವ ಉದ್ದೇಶದಿಂದ ದಸರಾ ಸಮಿತಿಯ ಸಹಕಾರದೊಂದಿಗೆ ಯುವ ದಸರಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಅಪರೂಪದ ವಿವಿಧ ತಳಿಗಳ ಶ್ವಾನ ಪ್ರದರ್ಶನ ಪ್ರಾಣಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಯುವ ದಸರಾ ಸಮಿತಿ ಅಧ್ಯಕ್ಷ ಕೊತ್ತೋಳಿ ಕವನ್ ಹಾಗೂ ಪದಾಧಿಕಾರಿಗಳ ವಿಶೇಷ ಮುತುವರ್ಜಿಯಲ್ಲಿ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನಕ್ಕೆ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ ಸೇರಿದಂತೆ ಗಣ್ಯರು ಶನಿವಾರ ಬೆಳಗ್ಗೆ ವಿಧ್ಯುಕ್ತ ಚಾಲನೆ ನೀಡಿದರು.
ವಿವಿಧ ತಳಿಗಳ ಶ್ವಾನಗಳ ಆಕರ್ಷಕ ಪ್ರದರ್ಶನ
ಪ್ರದರ್ಶನದಲ್ಲಿ ಕೊಡಗು ಸೇರಿದಂತೆ ಮೈಸೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಹತ್ತಾರು ಶ್ವಾನ ಪಾಲಕರು ತಮ್ಮ ಮುದ್ದಿನ ಶ್ವಾನಗಳೊಂದಿಗೆ ಪಾಲ್ಗೊಂಡಿದ್ದರು. ಸಾಲುಕಿ, ಅಮೆರಿಕನ್ ಬುಲ್ಡಾಗ್, ಡಾಬರ್ಮನ್, ಜರ್ಮನ್ ಶೆಫರ್ಡ್, ಡ್ಯಾಶ್ಹೌಂಡ್, ಶಿಹ್ ತ್ಸು, ಪಗ್, ಬೆಲ್ಜಿಯನ್ ಶೆಫರ್ಡ್, ಡಾಗೊ ಅರ್ಜೆಂಟಿನೊ, ಗ್ರೇಟ್ ಡೇನ್, ರಾಟ್ವೀಲರ್, ಸೈಬೀರಿಯನ್ ಹಸ್ಕಿ, ಬೆಲ್ಜಿಯನ್ ಮೆಲಿನಾಯ್ಸ್, ಗೋಲ್ಡನ್ ರಿಟ್ರೀವರ್ ಹಾಗೂ ಲ್ಯಾಬ್ರಡಾರ್ ಸೇರಿದಂತೆ ಹಲವು ವಿದೇಶಿ ತಳಿಯ ಶ್ವಾನಗಳು ಗಮನ ಸೆಳೆದವು.
ರಾಜ್ಯದ ಹೆಮ್ಮೆಯ ಮುಧೋಳ ತಳಿ ಹಾಗೂ ತಮಿಳುನಾಡಿನ ರಾಜಪಾಳಯಂ ತಳಿಯ ಶ್ವಾನಗಳೂ ನೋಡುಗರ ಆಕರ್ಷಣೆಯ ಕೇಂದ್ರವಾಗಿದ್ದವು. ಪಾಕೆಟ್ ಪೆಟ್ ಹಾಗೂ ಬೀಗಲ್ ತಳಿಯ ಶ್ವಾನಗಳು ವಿಶೇಷ ಗಮನ ಸೆಳೆದವು. ಮಾಲೀಕರೊಂದಿಗೆ ರ್ಯಾಂಪ್ ಮೇಲೆ ಆಕರ್ಷಕವಾಗಿ ಹೆಜ್ಜೆ ಹಾಕಿದ ಶ್ವಾನಗಳನ್ನು ಕಂಡು ನೂರಾರು ಪ್ರಾಣಿ ಪ್ರಿಯರು ಸಂಭ್ರಮಿಸಿದರು.
ವಿಜೇತರಿಗೆ ಟ್ರೋಫಿ, ಪದಕ ವಿತರಣೆ
ಅತ್ಯುತ್ತಮ ತಳಿ, ಶಿಸ್ತು ಹಾಗೂ ಮಾಲೀಕರ ಸೂಚನೆಗಳಿಗೆ ಸ್ಪಂದಿಸುವ ಸಾಮರ್ಥ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪಶುಪಾಲನಾ ಇಲಾಖೆಯ ಪಶುವೈದ್ಯರು ಶ್ವಾನಗಳನ್ನು ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡಿದರು. ವಿಜೇತರಿಗೆ ಗಣ್ಯರು ಟ್ರೋಫಿ, ಪದಕ ಹಾಗೂ ಪ್ರಶಂಸನಾ ಪತ್ರಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಶ್ವಾನಗಳಿಗೆ ಸ್ಥಳದಲ್ಲಿಯೇ ರೇಬಿಸ್ ನಿರೋಧಕ ಲಸಿಕೆ ನೀಡುವ ವ್ಯವಸ್ಥೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಕಲ್ಪಿಸಲಾಗಿತ್ತು.
ಮೂಕ ಪ್ರಾಣಿಗಳ ಬಗ್ಗೆ ಕಾಳಜಿ ಇರಲಿ: ಪಿ. ಕಲಾವತಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ ಅವರು, ಮೂಕ ಪ್ರಾಣಿಗಳ ಸಂಕಷ್ಟಗಳಿಗೆ ಸ್ಪಂದಿಸುವ ಪಶುವೈದ್ಯರ ಸೇವೆಯನ್ನು ಶ್ಲಾಘಿಸಿದರು. ನಗರ ವ್ಯಾಪ್ತಿಯಲ್ಲಿನ ಬಿಡಾಡಿ ದನಗಳು ಹಾಗೂ ಶ್ವಾನಗಳಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ವೈದ್ಯರು ಸೂಕ್ತವಾಗಿ ಸ್ಪಂದಿಸುತ್ತಿರುವುದನ್ನು ಸ್ಮರಿಸಿದ ಅವರು, ಸಾಕುಪ್ರಾಣಿಗಳ ಬಗ್ಗೆ ಪ್ರೀತಿ, ಕಾಳಜಿ ಹಾಗೂ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಗಾಯಗೊಂಡ ಪ್ರಾಣಿಗಳಿಗೆ ಮಾನವೀಯತೆಯಿಂದ ಸ್ಪಂದಿಸಿ: ನಿತಿನ್ ಚಕ್ಕಿ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಶ್ವಾನ ಪ್ರದರ್ಶನವು ಕೇವಲ ಸಾಕುಪ್ರಾಣಿಗಳ ಪ್ರದರ್ಶನಕ್ಕೆ ಸೀಮಿತವಾಗಬಾರದು. ನಮ್ಮ ಸುತ್ತಮುತ್ತಲಿನ ಮೂಕ ಪ್ರಾಣಿಗಳ ಬಗ್ಗೆ ಕಾಳಜಿ ಮತ್ತು ದಯೆ ತೋರುವುದು ಅತ್ಯವಶ್ಯಕ ಎಂದರು.
ಮುಖ್ಯ ರಸ್ತೆಗಳಲ್ಲಿ ಅನೇಕ ಬಾರಿ ಪ್ರಾಣಿಗಳು ವಾಹನಗಳ ಅಪಘಾತಕ್ಕೆ ಸಿಲುಕಿ ಗಾಯಗೊಳ್ಳುವ ಹಾಗೂ ಸಾವನ್ನಪ್ಪುವ ಘಟನೆಗಳು ನಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಅವುಗಳ ಸಂಕಷ್ಟಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ರೇಬಿಸ್ ಮುಕ್ತ ಗುರಿಗೆ ಸಹಕರಿಸಿ: ಡಾ. ಲಿಂಗರಾಜು ದೊಡ್ಡಮನಿ
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ಡಾ. ಲಿಂಗರಾಜು ದೊಡ್ಡಮನಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 2030ರೊಳಗೆ ಮಾರಕ ರೇಬಿಸ್ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿವೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ತಿಂಗಳ ಕಾಲ ನಾಯಿಗಳಿಗೆ ಉಚಿತವಾಗಿ ರೇಬಿಸ್ ನಿರೋಧಕ ಲಸಿಕೆ ನೀಡಲಾಗುತ್ತಿದ್ದು, ಸಾಕುಪ್ರಾಣಿಗಳ ಮಾಲೀಕರು ಈ ಸೌಲಭ್ಯದ ಪ್ರಯೋಜನ ಪಡೆದು ತಮ್ಮ ನಾಯಿಗಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಸಾಕುಪ್ರಾಣಿಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಿ
ಅತಿಥಿಯಾಗಿ ಪಾಲ್ಗೊಂಡಿದ್ದ ತೆನ್ನಿರ ಮೈನಾ ಮಾತನಾಡಿ, ಶ್ವಾನಗಳು ಅತ್ಯಂತ ನಿಷ್ಠಾವಂತ ಸಾಕುಪ್ರಾಣಿಗಳಾಗಿದ್ದು, ಪುರಾಣಗಳಲ್ಲಿಯೂ ಅವುಗಳ ಉಲ್ಲೇಖವಿದೆ ಎಂದು ತಿಳಿಸಿದರು. ಸಾಕುಪ್ರಾಣಿಗಳ ಬಗ್ಗೆ ಪ್ರೀತಿ, ವಿಶ್ವಾಸ ಹಾಗೂ ಕಾಳಜಿ ತೋರುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಕೆ.ಪಿ. ಅಯ್ಯಪ್ಪ, ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಕೆ.ಪಿ. ಚಿದಾನಂದ, ವಿ.ಜಿ. ಮೋಹನ್, ಆಯೋಜಕರಾದ ಟಿ.ಆರ್. ಅರ್ಜುನ್, ಕಿರಣ್ ದೆರಾಜೆ, ತೀರ್ಪುಗಾರರಾದ ಡಾ. ಕ್ಯಾಪ್ಟನ್ ತಿಮ್ಮಯ್ಯ ಸೇರಿದಂತೆ ಹಲವು ಗಣ್ಯರು ಹಾಗೂ ಶ್ವಾನ ಪ್ರಿಯರು ಉಪಸ್ಥಿತರಿದ್ದರು.





































