ವಿರಾಜಪೇಟೆ, NEWS DESK ಅ.17: ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ (ರಿ.) ಆಶ್ರಯದಲ್ಲಿ 19ನೇ ವರ್ಷದ ಅದ್ದೂರಿ ಆಯುಧ ಪೂಜಾ ಸಮಾರಂಭವು ಅಕ್ಟೋಬರ್ 20ರಂದು ಮಂಗಳವಾರ ವಿರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಈ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು, ರೋಮಾಂಚಕ ಬೈಕ್ ಸಾಹಸ ಪ್ರದರ್ಶನ, ಸನ್ಮಾನ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜೂಡಿ ವಾಸ್ ತಿಳಿಸಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ
ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಮಾತನಾಡಿ, ಅಕ್ಟೋಬರ್ 20ರಂದು ಬೆಳಿಗ್ಗೆ 10 ಗಂಟೆಗೆ ಸಂಘದ ಕಚೇರಿಯಲ್ಲಿ ಚಂಡೆಮೇಳದೊಂದಿಗೆ ವಿಧ್ಯುಕ್ತವಾಗಿ ಆಯುಧ ಪೂಜೆ ನೆರವೇರಲಿದೆ. ಬಳಿಕ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಕುಂಬೆಯಂಡ ಸುರೇಶ್ ದೇವಯ್ಯ ವಹಿಸಲಿದ್ದು, ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜನಾರ್ದನ ಪ್ರಭು, ಮಡಿಕೇರಿಯ ಶಾಂತಿನಿಕೇತನ ಅಧ್ಯಕ್ಷ ಚೇತನ್, ಜೈ ಜವಾನ್ ಡಿಫೆನ್ಸ್ ಅಕಾಡೆಮಿ ನಿರ್ದೇಶಕ ಕುಪ್ಪಂಡ ಲವನ್ ಮಾದಪ್ಪ, ಕೂರ್ಗ್ ಅವೆನ್ಯೂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಹನೀಫ್ ಎಂ.ಎಸ್., ಉದ್ಯಮಿ ಕೆ.ವಿ. ಮೋಹನ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೊ, ಪ್ರಗತಿ ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ, ಉದ್ಯಮಿ ಹಾಗೂ ಕಾಫಿ ಬೆಳೆಗಾರ ದೇಯಡ ಜೆ. ಅಯ್ಯಪ್ಪ ಮತ್ತು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಳಮಂಡ ನೈನಾ ಜಗತ್ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಅನ್ನಸಂತರ್ಪಣೆ, ಬೈಕ್ ಸಾಹಸ ಪ್ರದರ್ಶನ
ಮಧ್ಯಾಹ್ನ 12.30ಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಪ್ರಸಿದ್ಧ ಬೈಕ್ ಸವಾರರಿಂದ ರೋಮಾಂಚಕ ಸಾಹಸ ಪ್ರದರ್ಶನ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಥಳೀಯ ಕಲಾ ಪ್ರತಿಭೆಗಳಿಗೆ ಬಹುಮಾನ ವಿತರಿಸಲಾಗುವುದು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಅಲ್ಲಂಡ ಕಸ್ತೂರಿ ಚಂಗಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೂರ್ಗ್ ಹಾಕಿ ಪ್ರಧಾನ ಕಾರ್ಯದರ್ಶಿ ಅಮ್ಮಂಡೀರ ಚೇತನ್, ಕೆ.ಪಿ.ಟಿ. ಟ್ರೇಡರ್ಸ್ ವ್ಯವಸ್ಥಾಪಕ ಇಬ್ರಾಯಿಂ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸುಭಾಶ್ ಮ್ಯಾಥ್ಯೂ, ಎನ್.ಎಸ್. ಕ್ಯಾಟರಿಂಗ್ ಮಾಲೀಕ ಎನ್.ಎಸ್. ರವಿ, ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಹಾಗೂ ಕೋಶಾಧಿಕಾರಿ ವಿನಂತ್ ಬಿ.ಎ. ಉಪಸ್ಥಿತರಿರಲಿದ್ದಾರೆ.
ಸಂಜೆ ಸಂಗೀತ ರಸಮಂಜರಿ, ಸಾಧಕರಿಗೆ ಸನ್ಮಾನ
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ, ಸನ್ಮಾನ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ನಿವೃತ್ತ ಹಿರಿಯ ಬಸ್ ಕಾರ್ಮಿಕರು, ಸಮಾಜ ಸೇವಕರು ಹಾಗೂ ಪ್ರತಿಭಾವಂತ ಬಸ್ ಕಾರ್ಮಿಕರ ಮಕ್ಕಳನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಆಯುಧ ಪೂಜೆಯ ಅಂಗವಾಗಿ ಸಾರ್ವಜನಿಕರಿಗಾಗಿ ಸಹಾಯಾರ್ಥ ಲಕ್ಕಿ ಡಿಪ್ ಡ್ರಾ ಆಯೋಜಿಸಲಾಗಿದೆ. ಬಳಿಕ ಕ್ಯಾಲಿಕಟ್ನ ಪ್ರಸಿದ್ಧ ‘ಸಾರಂಗ್ ಮ್ಯೂಸಿಕಲ್’ ತಂಡದಿಂದ ಮನರಂಜನಾ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜೂಡಿ ವಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ರಘು ಕೊಟ್ಯಾನ್, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್ನ ಮೈನಾ ಲೋಕೇಶ್, ತ್ರಿವೇಣಿ ಮೋಟಾರ್ಸ್ ಮಾಲೀಕ ಗುಡ್ಡಮ್ಮಾಡ ಅಪ್ಪಿ ಸುಬ್ರಮಣಿ, ಕಾಫಿ ಬೆಳೆಗಾರ ಮಾಳೆಟಿರ ಚುಕ್ಕು ದೇವಯ್ಯ, ವಿನಾಯಕ ಟ್ರಾವೆಲ್ಸ್ ಮಾಲೀಕ ಹೇಮಂತ್ ಬಿ.ಎ., ಮಂಜುನಾಥ ಮೋಟಾರ್ಸ್ ಮಾಲೀಕ ಕೈಬುಲಿರ ಮನು ನಂಜಪ್ಪ, ಜೈ ಜವಾನ್ ಕೋಲ್ಡ್ ಸ್ಟೋರೇಜ್ ಮಾಲೀಕ ವಾಟೇರಿರ ಜೀವನ್ ಹಾಗೂ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ ಭಾಗವಹಿಸಲಿದ್ದಾರೆ.
ಸಾರ್ವಜನಿಕರಿಗೆ ಆಹ್ವಾನ
ಆಯುಧ ಪೂಜೆಯ ಅಂಗವಾಗಿ ಆಯೋಜಿಸಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಸಂಗೀತ ಪ್ರೇಮಿಗಳು ಹಾಗೂ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಕುಪ್ಪಂಡ ಪ್ರಸಾದ್ ದೇವಯ್ಯ, ಸದಸ್ಯರಾದ ಅಶೋಕ್, ಲೋಕೇಶ್ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





































