ಮಡಿಕೇರಿ, NEWS DESK ಅ.17: ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವನ್ನು ಜನೋತ್ಸವವಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಮಹಿಳಾ ದಸರಾ ಕಾರ್ಯಕ್ರಮವನ್ನು ಅ.19ರಂದು ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ನಗರ ದಸರಾ ಸಮಿತಿ ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಮಹಿಳಾ ದಸರಾ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು ಹಾಗೂ ಮನರಂಜನಾ ಆಟೋಟಗಳು ನಡೆಯಲಿವೆ. ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೇಕಪ್ ಮಾಡುವ ಸ್ಪರ್ಧೆ, ಕೇಶ ವಿನ್ಯಾಸ, ಜಾನಪದ ನೃತ್ಯ (6ರಿಂದ 8 ಮಂದಿ ಒಳಗೊಂಡ ಗುಂಪು), ಫ್ಯಾಶನ್ ಶೋ, ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಅಮ್ಮನೊಂದಿಗೆ ಮಗಳು ಹಾಗೂ ಸೀರೆಗೆ ನಿಖರ ಬೆಲೆ ಹೇಳುವ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಇದರೊಂದಿಗೆ ಮಹಿಳೆಯರು ಉತ್ಪಾದಿಸಿರುವ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಳಿಗೆಗಾಗಿ ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸವಿತಾ – 9483785810, ಸಬಿತಾ – 8660180251, ನೇತ್ರ – 8431210080 ಅವರನ್ನು ಸಂಪರ್ಕಿಸಬಹುದು ಎಂದು ದಸರಾ ಸಾಂಸ್ಕೃತಿಕ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೂಳೆ ಸಾಂದ್ರತಾ ತಪಾಸಣಾ ಶಿಬಿರ
ಮಹಿಳಾ ದಸರಾ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ರೋಟರಿ ಸಂಸ್ಥೆ ವತಿಯಿಂದ ರವಿ ಆರ್ಥೋಪೆಡಿಕ್ ಸೆಂಟರ್ ಸಹಯೋಗದಲ್ಲಿ ಮೂಳೆ ಸಾಂದ್ರತಾ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆಯೊಂದಿಗೆ ಮಧುಮೇಹದಿಂದ ನರಗಳಿಗೆ ಉಂಟಾಗಿರುವ ತೊಂದರೆಗಳ ಪತ್ತೆ, ರಕ್ತದೊತ್ತಡ, ಮಧುಮೇಹ ಹಾಗೂ ಇತರ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.




































