ಮಡಿಕೇರಿ, NEWS DESK ಅ.19: ಗೃಹವಾರ್ತೆಗಳನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ತನ್ನದೇ ಆದ ಛಾಪು ಮೂಡಿಸಿರುವ ಮಹಿಳೆಯರ ಸಾಧನೆ, ಶಕ್ತಿ ಮತ್ತು ಸಾಮರ್ಥ್ಯವನ್ನು ಅನಾವರಣಗೊಳಿಸುವ 9ನೇ ವರ್ಷದ ಮಹಿಳಾ ದಸರಾ ಕಾರ್ಯಕ್ರಮವು ನಗರದ ಗಾಂಧಿ ಮೈದಾನದಲ್ಲಿ ಸಂಭ್ರಮದಿಂದ ನೆರವೇರಿತು.
ಮಡಿಕೇರಿ ನಗರ ದಸರಾ ಸಮಿತಿ ಮತ್ತು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾವನ್ನು ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ, ಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮಹಿಳೆಯರ ಸಾಧನೆಗೆ ಶಿಕ್ಷಣ ಅತ್ಯವಶ್ಯ: ವಿಜಯಲಕ್ಷ್ಮಿ ಸಿಂಗ್
ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಲಕ್ಷ್ಮಿ ಸಿಂಗ್ ಅವರು, ಮಹಿಳೆಯರು ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಶಿಕ್ಷಣ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು. ಪದವಿ ಪಡೆಯುವ ಹಂತದಲ್ಲಿಯೇ ತಾವು ಚಿತ್ರರಂಗಕ್ಕೆ ಪ್ರವೇಶಿಸಿದ್ದಾಗಿ ತಿಳಿಸಿದ ಅವರು, ಪದವಿ ಪಡೆಯಬೇಕೆಂಬ ತಮ್ಮ ಇಚ್ಛೆಯನ್ನು ಕಳೆದ ಸಾಲಿನಲ್ಲಿ ಈಡೇರಿಸಿಕೊಂಡಿದ್ದು, ಇದೀಗ ಪಿಎಚ್‌ಡಿ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು. ಶಿಕ್ಷಣ ಪಡೆಯಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ಆದ್ದರಿಂದ ಮಹಿಳೆಯರೆಲ್ಲರೂ ಶಿಕ್ಷಣ ಪಡೆದು ಜೀವನದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಮಹಿಳೆಯರು ಮಗಳಾಗಿ, ಗೃಹಿಣಿಯಾಗಿ ಹಾಗೂ ತಾಯಿಯಾಗಿ ಕುಟುಂಬದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಕಲಿಸುವ ಮೂಲಕ ಸಂಪ್ರದಾಯಗಳ ಉಳಿವಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಒತ್ತಡದ ಬದುಕಿನಲ್ಲಿ ಮಹಿಳೆಯರು ತಾಳ್ಮೆಯಿಂದ ಸವಾಲುಗಳನ್ನು ಎದುರಿಸಿ ಸಂತಸದ ಜೀವನ ನಡೆಸಬೇಕು. ಮಹಿಳೆಯರಿಗೆ ಯಾರಾದರೂ ಕೆಲಸವನ್ನು ವಹಿಸಿಕೊಡಬೇಕೆಂದೇನಿಲ್ಲ. ಅವರೇ ಸ್ವಯಂಪ್ರೇರಣೆಯಿಂದ ಕಾರ್ಯಗಳನ್ನು ಕೈಗೆತ್ತಿಕೊಂಡು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಮಹಿಳೆಯರು ಸಮಾಜದ ಅಭಿವೃದ್ಧಿಯ ಶಕ್ತಿ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ, ಮಹಿಳೆಯರು ಎಂದಿಗೂ ಅಬಲೆಯರಲ್ಲ, ಸಬಲೆಯರು. ಶಿಕ್ಷಣದ ಶಕ್ತಿಯನ್ನು ಅರಿತುಕೊಳ್ಳುವ ಮೂಲಕ ಮಹತ್ತರ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಕ್ರೀಡಾ ಕ್ಷೇತ್ರದ ಪೂವಮ್ಮ ಹಾಗೂ ಉದ್ಯಮ ಕ್ಷೇತ್ರದ ಕಿರಣ್ ಮಜುಂದಾರ್ ಅವರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಮಹತ್ತರವಾದುದು ಎಂದು ಅಭಿಪ್ರಾಯಪಟ್ಟರು.
ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಮಾತನಾಡಿ, ಮಹಿಳಾ ದಸರಾ ಕೇವಲ ಮಹಿಳೆಯರ ಹಬ್ಬವಲ್ಲ; ಇದು ಮಹಿಳೆಯರ ಸಾಧನೆ, ಒಗ್ಗಟ್ಟು ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ದಸರಾ ಜನೋತ್ಸವವು ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಸಂಭ್ರಮಿಸುವ ಉತ್ಸವವಾಗಿದೆ ಎಂದು ಹೇಳಿದರು.
ಸಾಧನಾ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಹಾಗೂ ನಿವೃತ್ತ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಮಾತನಾಡಿ, ಮಹಿಳಾ ದಸರಾ ಉತ್ಸವವು 2014ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭಗೊಂಡು, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಭ್ರಮ ಮತ್ತು ಸಡಗರದಿಂದ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಪಿ. ಕಲಾವತಿ ಅವರು ಮಹಿಳಾ ದಸರಾ ಉತ್ಸವಕ್ಕೆ ಶುಭ ಹಾರೈಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ಮಹಿಳೆಯರು ಜೀವನದಲ್ಲಿ ಹತ್ತು ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಮಹಿಳೆಯೊಬ್ಬಳು ಸ್ವಾವಲಂಬಿಯಾದರೆ ಆ ಕುಟುಂಬ ಸ್ವಾವಲಂಬನೆ ಸಾಧಿಸಿದಂತೆ. ಇದರಿಂದ ಒಟ್ಟಾರೆ ಸಮಾಜದ ಅಭಿವೃದ್ಧಿಗೂ ನೆರವಾಗುತ್ತದೆ ಎಂದು ಹೇಳಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮನೆಯನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆಯರು ಮನೆಯ ಹೊರಗಿನ ಕಾರ್ಯಗಳನ್ನೂ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಇಂತಹ ಮಹಿಳೆಯರು ತಮ್ಮನ್ನು ತಾವು ಗೌರವಿಸಿಕೊಳ್ಳಬೇಕು ಎಂದು ತಿಳಿಸಿದರು.
ಗಣ್ಯರ ಉಪಸ್ಥಿತಿ
ವೇದಿಕೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಖಜಾಂಚಿ ಸಬಿತಾ ವಿಜಯ್, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಉಸ್ತುವಾರಿ ಅನಿತಾ ಪೂವಯ್ಯ, ಮುಡಾ ನಿರ್ದೇಶಕಿ ಮಿನಾಜ್ ಪ್ರವೀಣ್, ಓಡಿಪಿ ಮುಖ್ಯಸ್ಥೆ ಜಾಯ್ಸ್ ಮಿನೇಜಸ್, ನಗರಸಭಾ ಸದಸ್ಯರಾದ ಚಿತ್ರಾವತಿ ಮತ್ತು ಉಷಾ ಕೆ., ನಗರಸಭೆಯ ಮಾಜಿ ಅಧ್ಯಕ್ಷೆ ಜುಲೇಖಾಬಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿದರು. ಬಾಳೆಯಡ ದಿವ್ಯ ಮಂದಪ್ಪ ವಂದಿಸಿದರು.
ಸ್ವಸಹಾಯ ಸಂಘಗಳ ವಸ್ತುಪ್ರದರ್ಶನ, ವಿವಿಧ ಸ್ಪರ್ಧೆಗಳು
ಮಹಿಳಾ ದಸರಾ ಅಂಗವಾಗಿ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ತಾವು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಸಿ ಗಮನ ಸೆಳೆದರು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳು ಕೂಡ ಪ್ರೇಕ್ಷಕರ ಗಮನ ಸೆಳೆದವು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ಸನ್ಮಾನ
ಮಹಿಳಾ ದಸರಾ ಸಮಾರಂಭದಲ್ಲಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಾದ ಉಮಾವತಿ ಬಿ. (ಪುಟಾಣಿನಗರ), ಕುಸುಮ ಬಿ. (ಸಂಪಾಜೆ), ಪುಷ್ಪಾವತಿ ಬಿ.ಎಂ. (ಬೆಟ್ಟಗೇರಿ) ಮತ್ತು ಜಯಲಕ್ಷ್ಮಿ (ಚೇರಂಬಾಣೆ) ಅವರನ್ನು ಗೌರವಿಸಲಾಯಿತು.
ಅಂಗನವಾಡಿ ಸಹಾಯಕಿಯರಾದ ಅಮೀನ (ಅಯ್ಯಂಗೇರಿ), ನೀಲಮ್ಮ (ಅವಂದೂರು), ಜಯಂತಿ (ಶಾಸ್ತ್ರಿ ನಗರ, ಮಡಿಕೇರಿ) ಹಾಗೂ ವಸಂತಿ ಡಿ.ಡಿ. (ಚೆಟ್ಟಿಮಾನಿ) ಅವರನ್ನು ಸನ್ಮಾನಿಸಲಾಯಿತು.
ಆಶಾ ಕಾರ್ಯಕರ್ತೆಯರಾದ ದಿವ್ಯ ಬಿ.ಎಲ್. (ಮಕ್ಕಂದೂರು), ಸುಶೀಲ ಕೆ.ಎನ್. (ಕರಿಕೆ), ರೋಹಿಣಿ ಬಿ.ಸಿ. (ಕೋಕೇರಿ, ಚೆಯ್ಯಂಡಾಣೆ) ಮತ್ತು ಪ್ರೇಮ ಬಿ.ಆರ್. (ಹೊದವಾಡ) ಅವರನ್ನು ಗೌರವಿಸಲಾಯಿತು.
ಮಡಿಕೇರಿ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಾದ ರಂಗಮ್ಮ, ಲಕ್ಷ್ಮಿ, ಲಕ್ಷ್ಮಮ್ಮ ಮತ್ತು ಮರಡಿ ಹನುಮಕ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳೆಯರ ಸಾಧನೆ, ಸ್ವಾವಲಂಬನೆ, ಶಿಕ್ಷಣ ಹಾಗೂ ಸಮಾಜಕ್ಕೆ ಅವರ ಕೊಡುಗೆಯನ್ನು ಗೌರವಿಸುವ ಮೂಲಕ ಮಹಿಳಾ ದಸರಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.

















