ವಿರಾಜಪೇಟೆ, NEWS DESK ಅ.19: ವಿದ್ಯಾರ್ಥಿಗಳಲ್ಲಿ ವಿವಿಧ ಪ್ರತಿಭೆಗಳಿದ್ದು, ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಪ್ರತಿಭಾ ದಿನಾಚರಣೆಗಳು ಉತ್ತಮ ವೇದಿಕೆಯಾಗಿದೆ ಎಂದು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಹೇಳಿದರು.
ಕಾಲೇಜಿನ ಸಭಾಂಗಣದಲ್ಲಿ ಸಾಂಸ್ಕೃತಿಕ ಘಟಕದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಶಿಕ್ಷಣದ ಮೂಲ ಗುರಿ ಜ್ಞಾನವನ್ನು ಪಡೆಯುವುದಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕು. ಗುರು ಹಿರಿಯರು ಹಾಗೂ ಪೋಷಕರಿಗೆ ಗೌರವ ನೀಡುವ ಮೂಲಕ ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಕಾಲೇಜಿನ ಸಾಂಸ್ಕೃತಿಕ ಘಟಕದ ವತಿಯಿಂದ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವುದು ಗಮನಾರ್ಹವಾಗಿದೆ ಎಂದರು.
ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕಾಗಿ ಸಿದ್ಧತೆ ನಡೆಸಿದ್ದು, ಇದೀಗ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಕಾಲೇಜಿನಲ್ಲಿ ಆಯೋಜಿಸಲಾಗುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕಿ ಹೇಮ ಬಿ.ಡಿ. ಹಾಗೂ ಸಾಂಸ್ಕೃತಿಕ ಘಟಕದ ಸಂಚಾಲಕಿ ಶಿಲ್ಪ ಕೆ.ಪಿ. ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗಮನ ಸೆಳೆದ ಸಾಂಸ್ಕೃತಿಕ ಪ್ರದರ್ಶನ; ಕುಣಿದು ಕುಪ್ಪಳಿಸಿ ಮನರಂಜಿಸಿದ ವಿದ್ಯಾರ್ಥಿಗಳು
ಪ್ರತಿಭಾ ದಿನಾಚರಣೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಪದವಿ ತರಗತಿಗಳ ವಿದ್ಯಾರ್ಥಿಗಳು ತರಗತಿವಾರು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಒಟ್ಟು 23 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಆರಂಭದಲ್ಲಿ ದುರ್ಗಾ ಮಾತೆಯು ಚಂಡ-ಮುಂಡ ರಕ್ಕಸರನ್ನು ಸಂಹರಿಸುವ ಪ್ರಹಸನದ ರೂಪದಲ್ಲಿ ಮೂಡಿಬಂದ ಸ್ವಾಗತ ನೃತ್ಯವು ಸರ್ವರ ಪ್ರಶಂಸೆಗೆ ಪಾತ್ರವಾಯಿತು.
ವೆಸ್ಟರ್ನ್ ಫ್ರೀಸ್ಟೈಲ್, ರೆಟ್ರೋ, ಗರ್ಭಾ, ಹಿಪ್ಹಾಪ್, ಸೆಮಿ ಕ್ಲಾಸಿಕಲ್, ವೆಸ್ಟರ್ನ್ ಡಾನ್ಸ್, ರಾಂಪ್ ವಾಕ್, ಗಾಯನ, ನಾಟಕ ಅಭಿನಯ, ಮೂಕಾಭಿನಯ ಹಾಗೂ ಸಾಂಪ್ರದಾಯಿಕ ನೃತ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ನೀಡಿದರು.
ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ನೋಡುಗರ ಮೆಚ್ಚುಗೆಗೆ ಪಾತ್ರರಾದರು. ವೇದಿಕೆಯಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಪ್ರತಿ ಕಾರ್ಯಕ್ರಮಕ್ಕೂ ಆಯಾ ತರಗತಿಯ ವಿದ್ಯಾರ್ಥಿಗಳ ನಿರೂಪಣೆ ಹಾಗೂ ನೃತ್ಯಶೈಲಿಯ ಕುರಿತು ವಿವರಣೆಯನ್ನು ನೀಡಲಾಯಿತು.
ಪದವಿ ಕಾಲೇಜಿನ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರತಿಭಾ ದಿನಾಚರಣೆಗೆ ವಿಶೇಷ ಮೆರುಗು ತಂದರು.

















